ದೇಶ ವಿದೇಶಗಳ ಭಕ್ತರನ್ನು ಅಕರ್ಷಿಸುವ ಉಚ್ಚಿಲ ಕ್ಷೇತ್ರ: ಶೋಭಾ ಕರಂದ್ಲಾಜೆ

Update: 2022-10-01 17:23 GMT

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರವು ದೇಶ ವಿದೇಶಗಳ ಭಕ್ತರನ್ನು ಅಕರ್ಷಿಸುವ ತಾಣವಾಗಿ ಮೂಡಿಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಬಾರಿಯ ದಸರಾ ಮಹೋತ್ಸವ ಅದರ ಹಿರಿಮೆಗೆ ಗರಿ ಮೂಡಿಸಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲಾ ದಸರಾ ಮಹೊತ್ಸವಗಳನ್ನು ಉಚ್ಚಿಲ ದಸರಾ ಮೀರಿಸಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಸಹಯೋಗ ದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯ ಉದ್ಘಾಟನೆ ಮತ್ತು ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರಕುಮಾರ್‌ ರಿಗೆ ಅಭಿನಂದನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಅವರು ಮಾತನಾಡಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಇಂದಿನ ಸನ್ಮಾನ ಸಹಕಾರಿ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಅವಿಭಜಿತ ದಕ ಜಿಲ್ಲೆಗೆ ಕೀರ್ತಿಯನ್ನು ತರುವ ಕೆಲಸ ಉಚ್ಚಿಲ ದಸರಾದ ಮೂಲಕ ನಡೆದಿದೆ. ಮುಂದೆ ಮೈಸೂರು ದಸರಾಕ್ಕೆ ಸಮಾನವಾಗಿ ಉಚ್ಚಿಲ ದಸರಾ ಹಬ್ಬ ಮೂಡಿಬರಲಿದೆ. ಈ ಮೂಲಕ ಸಮಾಜವನ್ನು ಬೆಸೆಯುವ ಕಾರ್ಯ ಇಲ್ಲಿ ನಡೆದಿದೆ. ಇಲ್ಲಿನ ನಿತ್ಯ ಅನ್ನ ಸಂತರ್ಪಣೆ ಅನುಕರನೀಯವಾದುದು. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ.ಸುವರ್ಣ, ಸಮಾರಂಭದ ಅಧ್ಯಕ್ಷತೆ ವಹಿಸಿ ದ್ದರು. ಶ್ರೀ ಮಹಾಲಕ್ಷ್ಮೀ ದೇವಳದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಮಾತನಾಡಿದರು. 

ಸನ್ಮಾನ: ಮಹಾಲಕ್ಷ್ಮೀ ಕೊ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ವತಿಯಿಂದ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರ ರತ್ನ ಡಾ.ಎಮ್.ಎನ್. ರಾಜೇಂದ್ರ ಕುಮಾರ್, ನಿರ್ದೇಶಕರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ ಮತ್ತು ಝೀ ಕನ್ನಡದ ಡ್ರಾಮಾ ಜ್ಯೂನಿಯರ್ ವಿಭಾಗದ 4ನೇ ಅವೃತ್ತಿಯಲ್ಲಿ ವಿಜೇತರಾದ ಸಮೃದ್ಧಿ ಕುಂದಾಪುರರವರನ್ನು ಸನ್ಮಾನಿಸಲಾಯಿತು.

ಮಂಜೂರಾತಿ ಪತ್ರ, ಚೆಕ್ ವಿತರಣೆ: ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಬಡಾ ಎರ್ಮಾಳ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮತ್ತು ಮಂದಾರ್ತಿ ಕುಲಮಹಾಸ್ತ್ರೀ ಸಹಕಾರ ಸಂಘಗಳಿಗೆ ಕಂಪ್ಯೂಟರ್ ಮಂಜೂರಾತಿ ಪತ್ರ, ಪಟ್ಲ ರೂರಲ್ ಎಜ್ಯುಕೇಶನ್ ಸೊಸೈಟಿಗೆ ರೂ. ಒಂದು ಲಕ್ಷದ ಚೆಕ್, ಎರ್ಮಾಳು ತೆಂಕ ಕಿನಾರಾ ಆಂಗ್ಲ ಮಾಧ್ಯಮ ಶಾಲೆಗೆ ರೂ. ಒಂದು ಲಕ್ಷದ ಚೆಕ್, ಕೊಡೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಸಲಕರಣೆಗಳು, ಬೆಣ್ಣೆಕುದ್ರು ಕುಲಮಹಾಸ್ತ್ರೀ ಸ್ವಸಹಾಯ ಸಹಕಾರಿ ಸಂಘಕ್ಕೆ ರೂ.25ಸಾವಿರದ ಚೆಕ್‍ಗಳನ್ನು ವಿತರಿಸಲಾಯಿತು.

ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್.ಸಾಲ್ಯಾನ್ ಮುಖ್ಯ ಅತಿಥಿಗಳಾಗಿದ್ದರು.

ಯಶಪಾಲ್ ಎ.ಸುವರ್ಣ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ವಿಜೇತಾ ಶೆಟ್ಟಿ ನಿರೂಪಿಸಿದರು. ಬ್ಯಾಂಕ್‍ನ ಎಮ್‍ಡಿ ಜಗದೀಶ ಮೊಗವೀರ ವಂದಿಸಿದರು. ಚಿತ್ರಕಲ ಸ್ಪರ್ಧೆಯ 5 ವಿಭಾಗಗಳಲ್ಲಿ 700ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News