ಬೀದಿಬದಿಯಲ್ಲಿ ಹಾಡು- ಚಿತ್ರಗಳ ಸಂವಾದ: ವಿನೂತನ ದಾಖಲೆಯತ್ತ ಶಿಕ್ಷಕ ದಂಪತಿ ಹೆಜ್ಜೆ

Update: 2022-10-03 03:35 GMT

ಮಂಗಳೂರು, ಅ.2: ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಶಿಕ್ಷಕ ದಂಪತಿ ಅಕ್ಷತಾ ಕುಡ್ಲ ಮತ್ತು ಚೇತನಠ್ ಕೊಪ್ಪ ಇದೀಗ ಹೊಸ ದಾಖಲೆಗೆ ಮುಂದಾಗಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ‘ಆನ್ ದಿ ವೇ’ ಎಂಬ ಪರಿಕಲ್ಪನೆಯೊಂದಿಗೆ 154 ಹಾಡುಗಳು ಹಾಗೂ ಬೃಹತ್ ಗಾಂಧೀಜಿಯ ಚಿತ್ರ ರಚನೆ (50X53 ಅಡಿ ಗಾತ್ರ) ಮೂಲಕ ಹೊಸ ದಾಖಲೆಯತ್ತ ಈ ಶಿಕ್ಷಕ ದಂಪತಿ ಹೆಜ್ಜೆ ಇರಿಸಿದ್ದಾರೆ.

ಉಳಾಯಿಬೆಟ್ಟು ಗ್ರಾಮದ ವಿಶಾಲ್ ಗಾರ್ಡನ್‌ನಲ್ಲಿ ಅಕ್ಷತಾ ಮತ್ತು ಚೇತನ್ ಶಿಕ್ಷಕ ದಂಪತಿಯ ಈ ವಿನೂತನ ಆನ್ ದಿ ವೇ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಪೋಷಕರೊಡನೆ ಸಂವಾದ ನಡೆಸಿ ಅದನ್ನು ದಾಖಲಿಸಲಿರುವ ಈ ದಂಪತಿ ಬೀದಿ ಬದಿಯನ್ನೇ ವೇದಿಕೆಯನ್ನಾಗಿಸಿ ಹಾಡು ಹಾಗೂ ಚಿತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಈ ಸಂದರ್ಭದಲ್ಲಿ ಜನರಿಂದ ಸಂಗ್ರಹವಾದ ವಂತಿಗೆಯನ್ನು ಆ ಊರಿನ ಸರಕಾರಿ ಶಾಲೆಗೆ ನೀಡುವ ಮೂಲಕ ಸರಕಾರಿ ಶಾಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಲು ನೀಡಲಿದ್ದಾರೆ.

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಅಕ್ಷತಾ ಕುಡ್ಲ ಯುವಜನ ಮೇಳಗಳಲ್ಲಿ ರಾಜ್ಯ ಮಟ್ಟದಲ್ಲಿ ಹಾಡಿಗಾಗಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಈಗಾಗಲೇ ಹೆಸರು ಪಡೆದಿದ್ದಾರೆ. ವಿಶ್ವ ತುಳು ಸಾಹಿತ್ಯ ಸಮ್ಮೇಳನ, ವಿಶ್ವ ಆಳ್ವಾಸ್ ನುಡಿಸಿರಿ ವಿರಾಸತ್, 2018ರ ಮಹಾಮಸ್ತಕಾಭಿಷೇಕದ ವೇದಿಕೆಗಳಲ್ಲಿ ಇವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅಕ್ಷತಾ ಕುಡ್ಲ 965ಕ್ಕೂ ಅಧಿಕ ಮಕ್ಕಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಉಳಾಯಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಚೇತನ್ ಕೊಪ್ಪ ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ಮುಹಮ್ಮದ್ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಡೇ ಕೂಗು, ಬಂಗಾರದ ರೆಕ್ಕೆ ಮೊದಲಾದ ಮಕ್ಕಳ ನಾಟಕಗಳನ್ನು ನಿರ್ದೇಶಿಸಿರುವ ಇವರು, ಶಿಕ್ಷಣ ಇಲಾಖೆಯ ಗುರುಚೇತನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದ ಸಂಶೋಧಕ ಶಿಕ್ಷಕರಾಗಿ ಸ್ವರೂಪ ಶಿಕ್ಷಣ ಜಾಗೃತಿ ಜಾಥಾದ ಮೂಲಕ 7 ವರ್ಷ ಪರ್ಯಾಯ ಶಿಕ್ಷಣದ ಸಾಧ್ಯತೆಯ ಚಿಂತನೆಯನ್ನು ಪಸರಿರುವ ಕಾರ್ಯ ನಿರ್ವಹಿಸಿದ್ದಾರೆ.

ಉಳಾಯಿ ಬೆಟ್ಟುವಿನ ವಿಶಾಲ್ ಗಾರ್ಡನ್‌ನಲ್ಲಿ ಈ ಶಿಕ್ಷಕ ದಂಪತಿಯ ಆನ್ ದಿ ವೇ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಡಾ ಭರತ್ ಶೆಟ್ಟಿ ಭೇಟಿ ನೀಡಿ ಶುಭ ಹಾರೈಸಿದರು. ಉಳಾಯಿ ಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್, ಪಂಚಾಯತ್ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ, ಕಲಾವಿದ ಮೆಹಬೂಬ್ ನಿನಾಸಂ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ದಸರಾ ರಜಾ ಸಮಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮೂಡಬಿದ್ರೆ, ಬೆಳ್ತಂಗಡಿ ಮೂಡಿಗೆರೆಯಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಶಿಕ್ಷಕ ದಂಪತಿ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News