ಬೆಂಗಳೂರು-ಮುರ್ಡೇಶ್ವರ ತಾತ್ಕಾಲಿಕ ರೈಲು; ಅದ್ದೂರಿ ಸ್ವಾಗತ

Update: 2022-10-02 15:30 GMT

ಭಟ್ಕಳ: ಬೆಂಗಳೂರು-ಮುರ್ಡೇಶ್ವರ ತಾತ್ಕಾಲಿಕ ರೈಲು ಮುರ್ಡೇಶ್ವರಕ್ಕೆ ಆಗಮಿಸುತ್ತಿದ್ದಂತೆಯೇ  ಮುರ್ಡೇಶ್ವರ ನಾಗರೀಕ ಸೇವಾ ಸಮಿತಿ ಹಾಗೂ ಊರ ನಾಗರೀಕರು ಅದ್ದೂರಿ ಸ್ವಾಗತ ಕೋರಿ ಸಂಭ್ರಮಿಸಿದರು. 

ವಿಶ್ವಪ್ರಖ್ಯಾತ ಪ್ರವಾಸಿತಾಣವಾದ ಮುರ್ಡೇಶ್ವರದ ಘನತೆ ಹೆಚ್ಚಿಸುವ ಈ ವಿಶೇಷ ರೈಲಿಗೆ ಮುರ್ಡೇಶ್ವರದ ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಎಸ್. ಕಾಮತ್ ನೇತೃತ್ವದಲ್ಲಿ ವೇದಿಕೆಯ ಸದಸ್ಯರು, ಸಾರ್ವಜನಿಕರು ಮಾಲಾರ್ಪಣೆ ಮಾಡಿ  ಪೂಜೆ ಸಲ್ಲಿಸಿದರು. ಶನಿವಾರ ರಾತ್ರಿ ಬೆಂಗಳೂರಿನಿಂದ ಹೊರಟು ಮುರ್ಡೇಶ್ವರ ತಲುಪಿದ ರೈಲಿನಲ್ಲಿ ಸಾಕಷ್ಟು ಪ್ರಯಾಣಿಕರಿದ್ದು ಉತ್ತಮ ಆದಾಯ ಕೂಡಾ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿದು ಬಂದಿತು.

ಈ ವಿಶೇಷ ರೈಲನ್ನು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರತಿ ದಿನ ಬಿಡುವಂತೆ ಮತ್ತು ಇದನ್ನು ಕಾರವಾರದ ವರೆಗೂ ವಿಸ್ತರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುರ್ಡೇಶ್ವರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಕಾಮತ್ ಅವರು ಇದೊಂದು ಪ್ರಾಯೋಗಿಕ ರೈಲಾಗಿದ್ದು, ಈ ವಿಶೇಷ ರೈಲನ್ನು ಮುರ್ಡೇಶ್ವರಕ್ಕೆ ಪ್ರತಿದಿನ ಓಡಿಸಬೇಕೆಂದು ಒತ್ತಾಯಿಸಲಾಗಿದೆ. ದಿನಂಪ್ರತಿ ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಮತ್ತು ಮುರ್ಡೇಶ್ವರದಿಂದ ಬೆಂಗಳೂರಿಗೆ ಈ ರೈಲು ಸಂಚರಿಸಿದರೆ ಪ್ರಯಾಣಿಕರಿಗೆ, ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದ್ದು ಶೀಘ್ರದಲ್ಲಿ ಇದು ಖಾಯಂ ಓಡಾಟ ಆರಂಭಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದುರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News