ಇರಾನ್ ಗಲಭೆಯ ಹಿಂದೆ ಅಮೆರಿಕ, ಇಸ್ರೇಲ್ ಕೈವಾಡ: ಅಯತುಲ್ಲಾ ಆಲಿ ಖಾಮಿನೈ ಆರೋಪ

Update: 2022-10-03 17:13 GMT
PHOTO: TWITTER

ಟೆಹ್ರಾನ್, ಅ.3: ಇರಾನ್‌ನಲ್ಲಿ ಗಲಭೆ ಎಬ್ಬಿಸಿ ಅಶಾಂತಿ ಹುಟ್ಟುಹಾಕಲು ಬದ್ಧವೈರಿಗಳಾದ ಇಸ್ರೇಲ್, ಅಮೆರಿಕ ಹಾಗೂ ವಿದೇಶದಲ್ಲಿರುವ ಕೆಲವು ದೇಶದ್ರೋಹಿ ಇರಾನಿಯನ್ನರು ಪಿತೂರಿ ನಡೆಸಿದ್ದಾರೆ ಎಂದು ಇರಾನ್ನ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ಸೋಮವಾರ ಆರೋಪಿಸಿದ್ದಾರೆ.
ಕುರ್ಡಿಷ್ ಮಹಿಳೆ ಮಹ್ಸಾ ಅಮಿನಿ ಸಾವಿನ ಬಳಿಕ ಇಸ್ಲಾಮಿಕ್ ಗಣರಾಜ್ಯದಲ್ಲಿ ಸಂಭವಿಸಿದ ಗಲಭೆ ಮತ್ತು ಅಶಾಂತಿಯ ಹಿಂದೆ ಅಮೆರಿಕ, ಆಕ್ರಮಿತ, ಅಬದ್ಧ ಯೆಹೂದಿ ಆಡಳಿತ, ಅವರ ಬಾಡಿಗೆ ಏಜೆಂಟರು ಮತ್ತು ವಿದೇಶದಲ್ಲಿರುವ ಕೆಲವು ದೇಶದ್ರೋಹಿ ಇರಾನಿಯನ್ನರ ಕೈವಾಡವಿದೆ ಎಂದು ಇರಾನ್‌ನಲ್ಲಿ ಗಲಭೆ ಭುಗಿಲೆದ್ದ ಬಳಿಕದ ಪ್ರಥಮ ಸಾರ್ವಜನಿಕ ಹೇಳಿಕೆಯಲ್ಲಿ ಖಾಮಿನೈ ಪ್ರತಿಕ್ರಿಯಿಸಿದ್ದಾರೆ.
 

ಯುವತಿಯ ಸಾವಿನಿಂದ ನಮ್ಮ ಹೃದಯವೂ ಒಡೆದಿದೆ. ಆದರೆ, ಕೆಲವು ಜನರು ಯಾವುದೇ ಪುರಾವೆಗಳಿಲ್ಲದೆ ಅಥವಾ ವಿಚಾರಣೆ ನಡೆಸದೆ ರಸ್ತೆಗಿಳಿದು ಹಿಂಸಾಚಾರ ನಡೆಸಿರುವುದು, ಕುರಾನ್ ಪ್ರತಿಯನ್ನು ದಹಿಸಿರುವುದು, ಮಹಿಳೆಯರ ಹಿಜಾಬ್ ತೆಗೆದಿರುವುದು, ಮಸೀದಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.

ಸೇನಾ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಖಾಮಿನೈ, ಪೊಲೀಸರು ಅಪರಾಧಿಗಳನ್ನು ಮಟ್ಟಹಾಕಲು ಮತ್ತು ಸಮಾಜದ ಸುರಕ್ಷತೆಯನ್ನು ಖಾತರಿಪಡಿಸಲು ಬದ್ಧರಾಗಿದ್ದಾರೆ. ಪೊಲೀಸರನ್ನು ದುರ್ಬಲಗೊಳಿಸುವುದು ಎಂದರೆ ಅಪರಾಧಿಗಳನ್ನು ಬಲಪಡಿಸುವುದು ಎಂದರ್ಥ. ಪೊಲೀಸರ ಮೇಲೆ ದಾಳಿ ಮಾಡಿದರೆ ಕಳ್ಳರು, ಕ್ರಿಮಿನಲ್ಗಳು, ಕೊಲೆಗಡುಕರ ವಿರುದ್ಧ ಜನರ ರಕ್ಷಣೆಗೆ ನಿಲ್ಲುವವರು ಯಾರು ? ಎಂದು ಪ್ರಶ್ನಿಸಿದರು.
ದೇಶದಾದ್ಯಂತ ಅಶಾಂತಿಯ ಸ್ಥಿತಿ ಸೃಷ್ಟಿಯಾಗಲು ಅಮೆರಿಕ ಮತ್ತದರ ಮಿತ್ರದೇಶ ಸೇರಿದಂತೆ ಬಾಹ್ಯಶಕ್ತಿಗಳ ಪ್ರಚೋದನೆ ಕಾರಣ ಎಂದು ಇರಾನ್ ನಿರಂತರ ಆರೋಪಿಸುತ್ತಿದೆ. ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ ಮತ್ತು ಪೋಲ್ಯಾಂಡ್ ಸಹಿತ 9 ವಿದೇಶಿ ಪ್ರಜೆಗಳನ್ನು ಬಂಧಿಸಿರುವುದಾಗಿ ಶುಕ್ರವಾರ ಇರಾನ್ನ ಗುಪ್ತಚರ ಇಲಾಖೆ ಹೇಳಿತ್ತು.

ಭದ್ರತಾ ಪಡೆಯೊಂದಿಗೆ ವಿದ್ಯಾರ್ಥಿಗಳ ಘರ್ಷಣೆ 

ಇರಾನ್‌ನಲ್ಲಿ ರವಿವಾರ ರಾತ್ರಿ ವಿದ್ಯಾರ್ಥಿಗಳು ಹಾಗೂ ಭದ್ರತಾ ಪಡೆಯ ಮಧ್ಯೆ ಘರ್ಷಣೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಮುಖ ತಂತ್ರಜ್ಞಾನ ವಿವಿಯಲ್ಲಿ ತರಗತಿಗಳನ್ನು ರದ್ದುಗೊಳಿಸಲಾಗಿದ್ದು ಸೋಮವಾರದಿಂದ ಆನ್ಲೈನ್ ತರಗತಿ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
 
ಇತ್ತೀಚಿನ ಘಟನೆಗಳು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಕಾರಣಕ್ಕೆ ಶರೀಫ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸೋಮವಾರದಿಂದ ವರ್ಚುವಲ್ ರೂಪದಲ್ಲಿ ತರಗತಿ ಮುಂದುವರಿದಿದೆ ಎಂದು ಮೆಹರ್ ನ್ಯೂಸ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರವಿವಾರ ಮಧ್ಯಾಹ್ನ ವಿವಿಯ ಮುಂಭಾಗ ಗುಂಪುಸೇರಿದ ಸುಮಾರು 200ರಷ್ಟು ವಿದ್ಯಾರ್ಥಿಗಳು ಇರಾನ್‌ನ ಆಡಳಿತದ ವಿರುದ್ಧ ಘೋಷಣೆ ಕೂಗಿದರು. 

‘ಮಹಿಳೆ, ಜೀವನ, ಸ್ವಾತಂತ್ರ್ಯ’, ‘ವಿದ್ಯಾರ್ಥಿಗಳು ಅವಮಾನಕ್ಕಿಂತ ಸಾವನ್ನು ಬಯಸುತ್ತಾರೆ’ ಎಂದು ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ಬಣ್ಣದ ಚೆಂಡುಗಳನ್ನು(ಬಣ್ಣ ಎರಚುವುದು) ಪ್ರಯೋಗಿಸಿದರು. ಬಳಿಕ ವಿಜ್ಞಾನ ಇಲಾಖೆಯ ಸಚಿವರು ವಿವಿ ಕ್ಯಾಂಪಸ್ಗೆ ಬಂದು ವಿದ್ಯಾರ್ಥಿಗಳ ಮನ ಒಲಿಸಲು ಪ್ರಯತ್ನಿಸಿದರು ಎಂದು ವರದಿಯಾಗಿದೆ.

ಕುರ್ಡಿಷ್ ಮಹಿಳೆ ಮಹ್ಸಾ ಅಮಿನಿ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ಇರಾನ್ನ ದ್ಯಂತ ಭುಗಿಲೆದ್ದಿರುವ ಪ್ರತಿಭಟನೆ 3ನೇ ವಾರಕ್ಕೆ ಮುಂದುವರಿದಿದ್ದು , ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಸುಮಾರು 100ರಷ್ಟು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News