ಅಮೆರಿಕಾ ಜೊತೆ ಸಮರಾಭ್ಯಾಸದ ವೇಳೆ ಪತನಗೊಂಡ ದಕ್ಷಿಣ ಕೊರಿಯಾದ ಕ್ಷಿಪಣಿ: ಭಯಭೀತರಾದ ನಿವಾಸಿಗಳು

Update: 2022-10-05 07:42 GMT
Photo: PTI

ಸಿಯೋಲ್: ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ನಡುವೆ ಸಮರಾಭ್ಯಾಸಗಳು ನಡೆಯುತ್ತಿರುವ ವೇಳೆ ದಕ್ಷಿಣ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ದೋಷದಿಂದಾಗಿ ಬುಧವಾರ ಬೆಳಿಗ್ಗೆ ಭೂಮಿಗೆ ಅಪ್ಪಳಿಸಿದ್ದು ಇದರಿಂದ ಅಲ್ಲಿನ ಕರಾವಳಿ ನಗರಿ ಗಂಗ್ನೀಯುಂಗ್ ನಿವಾಸಿಗಳು ಭಯಭೀತರಾದ ಘಟನೆ ನಡೆದಿದೆ. ಈಗಾಗಲೇ ವೈರಿ ದೇಶ ಉತ್ತರ ಕೊರಿಯಾದ ಆಕ್ರಮಣಕಾರಿ ಶಸ್ತ್ರಗಳ ಹೆಚ್ಚಿದ ಬಳಕೆಯಿಂದ ಭೀತಿಯಲ್ಲಿರುವ ನಗರವಾಸಿಗಳಿಗೆ ಈ ಘಟನೆ ಇನ್ನಷ್ಟು ಭಯ ಸೃಷ್ಟಿಸಿದೆ.

ಈ ಕ್ಷಿಪಣಿ ಸ್ಫೋಟಗೊಂಡು ನೆಲಕ್ಕೆ ಅಪ್ಪಳಿಸಿದಂತೆ ಕೇಳಿದ ದೊಡ್ಡ ಸದ್ದು ಅಲ್ಲಿನ ಜನರಿಗೆ ಇದು ಉತ್ತರ ಕೊರಿಯಾದಿಂದ ನಡೆದ ದಾಳಿ ಎಂಬ ಭಾವನೆ ಮೂಡಿಸಿತು. ಈ ಘಟನೆ ನಡೆದು ಹಲವು ಗಂಟೆಗಳ ಕಾಲ ಮಿಲಿಟರಿ ಅಥವಾ ಸರ್ಕಾರಿ ಅಧಿಕಾರಿಗಳು ಯಾವುದೇ ವಿವರಣೆ ನೀಡದೇ ಇರುವುದು ಜನರ ಭಯವನ್ನು ಇಮ್ಮಡಿಯಾಗಿಸಿತ್ತು.

ದೋಷ ಎದುರಿಸಿ ನೆಲಕ್ಕೆ ಅಪ್ಪಳಿಸಿದೆ ಕ್ಷಿಪಣಿ ಹೈಯುಮೂ-2 ಆಗಿದ್ದು ಈ ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ, ಈ ಕ್ಷಿಪಣಿಯು ನಗರದ ಹೊರವಲಯದ ವಾಯುನೆಲೆಯೊಳಗೆ ಅಪ್ಪಳಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ರಕ್ಷಣಾ ಪಡೆಗಳ ಮುಖ್ಯಸ್ಥರು ನಂತರ ಮಾಹಿತಿ ನೀಡಿದ್ದಾರೆ.

ಕ್ಷಿಪಣಿಯಲ್ಲಿನ ದೋಷಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ. ಮಂಗಳವಾರ ಮುಂಜಾನೆ ಉತ್ತರ ಕೊರಿಯಾದ ಅಣ್ವಸ್ತ್ರ ಸಮರ್ಥ ಬ್ಯಾಲಿಸ್ಟಿಕ್ ಕ್ಷಿಪಣಿಯು ಜಪಾನ್ ಮೂಲಕ ಹಾದು ಹೋದ ನಂತಗರ ನಡೆದ ಈ ಪರೀಕ್ಷೆಯು ದಕ್ಷಿಣ ಕೊರಿಯಾ ಮತ್ತು ಅಮೆರಿಕಾದ ಶಕ್ತಿ ಪ್ರದರ್ಶನದ ಉದ್ದೇಶ ಹೊಂದಿತ್ತು.

ಈ ವರ್ಷ ಉತ್ತರ ಕೊರಿಯಾ  20 ವಿಭಿನ್ನ ಉಡಾವಣೆ ಕಾರ್ಯಕ್ರಮದಲ್ಲಿ 40 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News