ಬ್ರಹ್ಮಾವರ: ಆತಂಕಕ್ಕೆ ಕಾರಣವಾಗಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆ

Update: 2022-10-05 09:53 GMT

ಬ್ರಹ್ಮಾವರ, ಅ.5: ಮಟಪಾಡಿ ಪರಿಸರದಲ್ಲಿ ಹಲವು ಸಮಯಗಳಿಂದ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕೆಲವು ತಿಂಗಳ ಹಿಂದೆ ಮಟಪಾಡಿ ಪರಿಸರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಹಲವು ಮನೆಯ ಸಾಕುನಾಯಿಗಳನ್ನು ಬೇಟೆಯಾಡಿತ್ತು. ಇದರಿಂದ ಸ್ಥಳೀಯರು ಸಾಕಷ್ಟು ಆತಂಕಕ್ಕೆ ಒಳಗಾಗಿ, ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಉಡುಪಿ ವಲಯ ಅರಣ್ಯ ಇಲಾಖೆಯವರು ವಾರದ ಹಿಂದೆ ಮಟಪಾಡಿ ಶ್ರೀನಿಕೇತನ್ ಶಾಲೆಯ ಸಮೀಪದ ಹಾಡಿಯಲ್ಲಿ ನಾಯಿ ಜೊತೆ ಬೋನನ್ನು ಇರಿಸಿದ್ದರು.

ಮಂಗಳವಾರ ರಾತ್ರಿ ಬೇಟೆ ಅರಸಿ ಬಂದ 4-5 ವರ್ಷ ಪ್ರಾಯದ ಹೆಣ್ಣು ಚಿರತೆಯು ಬೋನಿನೊಳಗೆ ಸೆರೆಯಾಗಿದೆ. ಬುಧವಾರ ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಅದರಂತೆ ಉಪವಲಯ ಅರಣ್ಯಾಧಿಕಾರಿ ಹರೀಶ್ ನೇತೃತ್ವದ ಸಿಬ್ಬಂದಿ, ಹಂದಾಡಿ ಗ್ರಾಪಂ ಸದಸ್ಯರಾದ ಅಶೋಕ್ ಪೂಜಾರಿ, ಪವಿತ್ರ ನಾಯಕ್, ಭಾನುಮತಿ, ಚಂದ್ರಶೇಖರ ಪೂಜಾರಿ, ಜ್ಯೋತಿ ಬಾಯಿ  ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡ ಲಾಯಿತು.

ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರುಗಳಾದ ಸುರೇಶ್, ಜಾಯ್, ರಮೇಶ್, ವಿತೇಶ್ ಮೊದಲಾದವರು ಪಾಲ್ಗೊಂಡಿದ್ದರು

ಸ್ಥಳೀಯರಾದ ಸೂರ್ಯನಾರಾಯಣ ಗಾಣಿಗ ಗೋಪಾಲ್ ಪೂಜಾರಿ  ಸ್ಟೀವನ್ ಮಂಜುನಾಥ ಭಂಡಾರಿ ಶ್ರೀನಿವಾಸ್ ಪೂಜಾರಿ ಶರತ್ ಭಂಡಾರಿ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News