ಪ್ರೊ.ಕೆ.ಆರ್.ಮೂರ್ತಿಗಳ ‘ನೃತ್ಯ ಶಾಸ್ತ್ರ ಮಂಜರಿ’ ಗ್ರಂಥಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪುಸ್ತಕ ಬಹುಮಾನ

Update: 2022-10-05 13:47 GMT

ಉಡುಪಿ, ಅ.5: ಮೈಸೂರಿನ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಅವರು ನೃತ್ಯ ಕ್ಷೇತ್ರಕ್ಕಾಗಿ ಬರೆದಿರುವ ಸುಮಾರು 500 ಪುಟಗಳ ‘ನೃತ್ಯ ಶಾಸ್ತ್ರ ಮಂಜರಿ’ ಎಂಬ ಪರಾಮರ್ಶನ ಗ್ರಂಥಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಈ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಇದೇ ಅ.11ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಮಮೂರ್ತಿ ರಾವ್ ಅವರಿಗೆ  ಬಹುಮಾನ  ನೀಡಿ ಗೌರವಿಸಲಾಗುವುದು.  ಇದು 25,000 ರೂ.ಗಳ ನಗದು, ಶಾಲು, ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನೊಳಗೊಂಡಿರುತ್ತದೆ. 

ಸುಮಾರು  ಮೂವತ್ತೆರಡು ಅಧ್ಯಾಯಗಳನ್ನು ಹೊಂದಿರುವ  ಈ ಗ್ರಂಥ ಭರತನಾಟ್ಯ ವಿದ್ಯಾರ್ಥಿಗಳಿಗೆ, ಗುರು ಗಳಿಗೆ ಅಷ್ಟೇ ಅಲ್ಲದೆ ನೃತ್ಯ ಕಲಾಸಕ್ತರಿಗೂ ಉಪಯುಕ್ತವಾದ ಗ್ರಂಥ. ಈ ಪುಸ್ತಕಕ್ಕೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮುನ್ನುಡಿ ಬರೆದಿದ್ದು ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿದೆ.

ಮೂಲತಃ ಉಡುಪಿಯ ಕುಕ್ಕಿಕಟ್ಟೆಯವರಾದ ರಾಮಮೂರ್ತಿ, ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ, ನಂತರ ನಂಜನಗೂಡಿನ ಜೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ. ಸುಮಾರು ನಲವತ್ತು ವರ್ಷಗಳಿಂದ ಮೈಸೂರಿನ ನೃತ್ಯಕ್ಷೇತ್ರದಲ್ಲಿ ಸಕ್ರಿಯವಾಗಿರುವ ರಾಮಮೂರ್ತಿ ರಾವ್, ನಾಡಿನಾದ್ಯಂತ ಹಾಗೂ ವಿದೇಶಗಳಲೂ ತಮ್ಮ ಶಿಷ್ಯರನ್ನು ಹೊಂದಿದ್ದಾರೆ.

ಬರಹಗಾರರಾಗಿ, ಗುರುವಾಗಿ, ವಿಮರ್ಶಕರಾಗಿ ಚಿರಪರಿಚಿತರಾದ ಇವರು ಬರೆದಿರುವ ಅಂಕಣ ಬರಹಗಳ ಸಂಕಲನ, ಸಾಂಸ್ಕೃತಿಕ ಸಂವಾದ, ಮಾಸದ ಮಾತು ಪ್ರಕಟವಾಗಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರು ಬರೆದ ನಾಟ್ಯ ಸರಸ್ವತಿ ಜೆಟ್ಟಿತಾಯಮ್ಮ ಕೃತಿಯನ್ನು ಪ್ರಕಟಿಸಿದೆ. ಅಲ್ಲದೇ ಇವರ ಸಂಪಾದಕತ್ವದಲ್ಲಿ 32 ಲೇಖನಗಳಿರುವ ನೃತ್ಯ ದರ್ಪಣ ಎಂಬ ಪುಸ್ತಕ ಪ್ರಕಟಿಸಿದೆ. ಸಂಗೀತ  ನೃತ್ಯ ಅಕಾಡೆಮಿಯ 2005-06ನೇ ಸಾಲಿನ ಗೌರವ ಪ್ರಶಸ್ತಿ ಅಲ್ಲದೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News