ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನದಿಂದ ಪಚ್ಚನಾಡಿಯ 12 ಕುಟುಂಬಗಳಿಗೆ ಸೋಲಾರ್ ಲೈಟ್ ಅಳವಡಿಕೆ

Update: 2022-10-05 14:19 GMT

ಮಂಗಳೂರು, ಅ.5: ಸಮಾಜದ ನಿರ್ಲಕ್ಷಿತ ವರ್ಗಗಳನ್ನು ತಲುಪಲು ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನದ ಹೊಸ ಯೋಜನೆಯಡಿ ನಗರದ ಪಚ್ಚನಾಡಿಯಲ್ಲಿ ವಾಸಿಸುವ 12 ತ್ಯಾಜ್ಯ ಸಂಗ್ರಹಿಸುವ ಕುಟುಂಬಗಳಿಗೆ ಅಗತ್ಯ ಒಳಾಂಗಣ ಸೌರ ದೀಪಗಳನ್ನು 1.26 ಲಕ್ಷ  ರೂ. ವೆಚ್ಚದಲ್ಲಿ ಅಳವಡಿಸಿದೆ. ಈ ಯೋಜನೆಯು ವಿಶೇಷವಾಗಿ ಸುಮಾರು 20 ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ.

ಈ ಕುಟುಂಬಗಳು ಹಲವು ವರ್ಷಗಳಿಂದ ತಮ್ಮ ವಸತಿ ಗೃಹಗಳಿಗೆ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಕತ್ತಲಲ್ಲಿಯೇ ಜೀವನ ನಡೆಸುತ್ತಿತ್ತು. ವಿಷಜಂತುಗಳ ಭಯದಲ್ಲಿ ಕುಟುಂಬಗಳು ಬದುಕುತ್ತಿದ್ದವು. ರಾತ್ರಿ ವೇಳೆ ಮಕ್ಕಳು ಓದಲು ಕಷ್ಟಪಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ  ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನವು ಸೌರ ದೀಪಗಳನ್ನು ಪೂರೈಸುವ ಯೋಜನೆಯನ್ನು ರೂಪಿಸಿತು.  ಸೆಲ್ಕೊ ಪ್ರತಿಷ್ಠಾನದ ಅಂಗಸಂಸ್ಥೆಯಾದ ಸೆಲ್ಕೋ ಇಂಡಿಯಾ ಕಡಿಮೆ ದರದಲ್ಲಿ ಸೌರ ದೀಪಗಳನ್ನು ಒದಗಿಸಿತು. ಸ್ಥಳೀಯ ಮತ್ತು ಅನಿವಾಸಿ ದಾನಿಗಳು ಯೋಜನೆಗೆ ನೆರವು ನೀಡಿದ್ದಾರೆ ಎಂದು ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಎ. ರೆಹಮಾನ್ ಹೇಳಿದ್ದಾರೆ.

ರವಿ ಕರ್ಕೇರ, ಸಂತೋಷ್ ಶೆಟ್ಟಿ, ಸದಾಶಿವ ಪೂಜಾರಿ, ಸತೀಶ್ ಸಾಲ್ಯಾನ್, ಸಂದೀಪ್ ಚೌಧರಿ, ಗುರುರಾಜ್ ಪೂಜಾರಿ, ವಿರಾಜ್ ಶೆಟ್ಟಿ, ಯೋಗೀಶ್ ಪೂಜಾರಿ, ರೆಮ್ಮಿ ಲೋಬೋ, ಅಶ್ವಿನಿ ದಿನೇಶ್ ದಾನಿಗಳಾಗಿದ್ದಾರೆ.
ಯೋಜನೆಯನ್ನು ಹಸಿರು ದಳದಿಂದ ನಾಗರಾಜ್ ಅಂಚನ್, ರೂಪಕಲಾ ಮತ್ತು ಹೇಮಚಂದ್ರ ಮತ್ತು ಎಪಿಡಿ ಪ್ರತಿಷ್ಠಾನದಿಂದ ಗೀತಾ ಸೂರ್ಯ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News