ಎಮ್ಮೆಗಳ ಬಳಿಕ ಹಸುವಿಗೆ ಢಿಕ್ಕಿಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು

Update: 2022-10-07 15:45 GMT
Photo: NDTV

ಹೊಸದಿಲ್ಲಿ: ಎಮ್ಮೆಗಳ ಹಿಂಡಿಗೆ ವಂದೇ ಮಾತರಂ ರೈಲು ಢಿಕ್ಕಿ ಹೊಡೆದ ಒಂದು ದಿನದಲ್ಲೇ ಗಾಂಧಿನಗರ-ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಶುಕ್ರವಾರ ಹಸುವಿಗೆ ಢಿಕ್ಕಿ ಹೊಡೆದಿದೆ.  ಹಸುವಿಗೆ ಢಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗದ ಬಂಪರ್‌ನಲ್ಲಿ ಡೆಂಟ್‌ ಆಗಿದ್ದು,  10 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರದಂದು, ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ರೈಲಿನ ಮುಂಭಾಗ ಕಳಚಿ ಬಿದ್ದಿತ್ತು. ಜಾನುವಾರುಗಳೂ ಸಾವನ್ನಪ್ಪಿದ್ದವು. 

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ಜಾನುವಾರುಗಳೊಂದಿಗೆ ಇಂತಹ ಮುಖಾಮುಖಿಯನ್ನು ತಪ್ಪಿಸಲಾಗುವುದಿಲ್ಲ. "ರೈಲು ವಿನ್ಯಾಸ ಮಾಡುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ. "ಮುಂಭಾಗದಲ್ಲಿರುವ ಅದರ ಬಂಪರ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಬಹುದಾಗಿದೆ" ಎಂದು ಅವರು ಹೇಳಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ರೈಲಿಗೆ ಚಾಲನೆ ನೀಡಿ, ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದ್ದರು.

ಗಾಂಧಿನಗರದಿಂದ ಸುಮಾರು 100 ಕಿಲೋಮೀಟರ್ ಹಾಗೂ  ಮುಂಬೈನಿಂದ 400 ಕಿಮೀ ದೂರದಲ್ಲಿರುವ ಆನಂದ್ ಪಟ್ಟಣದ ಬಳಿ ಸಂಜೆ 4 ಗಂಟೆಯ ವೇಳೆಗೆ ಇಂದಿನ ಅಪಘಾತ ನಡೆದಿದೆ. 

"ರೈಲಿನ ಮುಂಭಾಗದಲ್ಲಿ ಸಣ್ಣ ಡೆಂಟ್ ಆಗಿದೆ" ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News