ಝೆಲೆನ್ಸ್ಕಿ ಹೇಳಿಕೆ ನಮ್ಮ ದಾಳಿಯನ್ನು ಸಮರ್ಥಿಸುತ್ತದೆ: ರಶ್ಯ

Update: 2022-10-07 17:18 GMT

ಮಾಸ್ಕೊ, ಅ.7: ರಶ್ಯದ ಮೇಲೆ ನೇಟೊ ಪ್ರತಿಬಂಧಕ ದಾಳಿ ನಡೆಸಬೇಕಿತ್ತು ಎಂಬ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿಕೆ  ಆ ದೇಶದ ಮೇಲೆ ನಾವು ನಡೆಸಿರುವ ವಿಶೇಷ ಕಾರ್ಯಾಚರಣೆಯನ್ನು  ಸಮರ್ಥಿಸುತ್ತದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.

ಹಾಗೆ ಹೇಳಿಕೆ ನೀಡುವ ಮೂಲಕ ಅವರು ಮೂಲಭೂತವಾಗಿ ಉಕ್ರೇನ್ ಆಡಳಿತವು ಒಡ್ಡಿರುವ ಬೆದರಿಕೆಗಳನ್ನು ಪುರಾವೆಯ ಸಹಿತ ಜಗತ್ತಿನ ಎದುರು ಪ್ರಸ್ತುತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಬೆದರಿಕೆಗಳನ್ನು ತಟಸ್ಥಗೊಳಿಸಲು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಲಾವ್ರೋವ್ ಹೇಳಿದ್ದಾರೆ.

ರಶ್ಯದಿಂದ ಪರಮಾಣು ಶಸ್ತ್ರಾಸ್ತ್ರಗಳ ಯಾವುದೇ ಬಳಕೆಯನ್ನು ತಡೆಗಟ್ಟಲು ಪ್ರತಿಬಂಧಕ ದಾಳಿ ಅಗತ್ಯ ಎಂದು  ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ್ದ ಝೆಲೆನ್ಸ್ಕಿ ಪ್ರತಿಪಾದಿಸಿದ್ದರು. ಯಾವ ರೀತಿಯ ದಾಳಿ, ಪರಮಾಣು ಅಸ್ತ್ರಗಳ ಬಳಕೆ ಅಗತ್ಯವೇ ಎಂಬ ಪ್ರಶ್ನೆಗೆ ನೇರವಾಗಿ ಅವರು ಉತ್ತರಿಸಲಿಲ್ಲ.

ಝೆಲೆನ್ಸ್ಕಿ ಅವರ ಹೇಳಿಕೆಯು ` ಊಹಿಸಲಾಗದ , ಅಗಾಧ ಪರಿಣಾಮಗಳೊಂದಿಗೆ ಮತ್ತೊಂದು ವಿಶ್ವಯುದ್ಧ ಪ್ರಾರಂಭಿಸಲು ಮಾಡಿದ ಮನವಿಯಾಗಿದೆ ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಟೀಕಿಸಿದ್ದಾರೆ. ತನ್ನ ನೆರೆಯ ದೇಶವನ್ನು ಸೇನಾಮುಕ್ತಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಶ್ಯ ಪ್ರತಿಪಾದಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News