ಉಡುಪಿ | ಅಪ್ರಾಪ್ತ ವಯಸ್ಸಿನ ಸಹೋದರಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ

Update: 2022-10-08 05:54 GMT
ಸಾಂದರ್ಭಿಕ ಚಿತ್ರ

ಉಡುಪಿ, ಅ.8: ಅಪ್ರಾಪ್ತ ವಯಸ್ಸಿನ ಬಾಲಕಿ ಹಾಗೂ ಆಕೆ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೊಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಹೋಟೆಲ್ ಉದ್ಯೋಗಿಯಾಗಿದ್ದ ಕಿಶನ್(27) ಶಿಕ್ಷೆಗೆ ಗುರಿಯಾದ ಆರೋಪಿ. ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಆರೋಪಿ ಕಿಶನ್ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿತ್ತು. ಬಳಿಕ ಆಕೆ ಸೋದರಿಯನ್ನು ಕೂಡ ಅಡ್ಡಗಟ್ಟಿದ್ದು ಆಕೆ ಆತನಿಂದ ತಪ್ಪಿಸಿಕೊಂಡಿದ್ದಳು ಎಂದು ಕೋಟ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

 ಅಂದಿನ ಎಸ್ಸೈ ಕಬ್ಬಾಳರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೊದಲಿಗೆ ಕುಂದಾಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, 2019ರಲ್ಲಿ ಉಡುಪಿಯಲ್ಲಿ ಪೊಕ್ಸೋ ವಿಶೇಷ ನ್ಯಾಯಾಲಯ ಸ್ಥಾಪಿತವಾದ ಬಳಿಕ ಇಲ್ಲಿಯೇ ವಿಚಾರಣೆ ಮುಂದುವರಿದಿತ್ತು. ನ್ಯಾಯಾಲಯದಲ್ಲಿ ಒಟ್ಟು 12 ಸಾಕ್ಷಿಗಳ ಪೈಕಿ 10 ಮಂದಿಯ ವಿಚಾರಣೆ ನಡೆದಿದ್ದು, ಸಂತ್ರಸ್ತರಿಬ್ಬರ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದ ಹಿನ್ನೆಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅಭಿಪ್ರಾಯಪಟ್ಟರು. ಅದರಂತೆ ಬಾಲಕಿ ಹಾಗೂ ಆಕೆ ಸೋದರಿಯನ್ನು ಅಕ್ರಮವಾಗಿ ತಡೆದಿದ್ದಕ್ಕೆ ಐಪಿಸಿ ಕಲಂ 341 ಅಡಿಯಲ್ಲಿ ಒಂದು ತಿಂಗಳು ಸಾದಾ ಸಜೆ, ಐಪಿಸಿ ಕಲಂ 354(ಎ), (ಬಿ)ಅಡಿಯಲ್ಲಿ 2 ವರ್ಷ ಕಠಿಣ ಸಜೆ ಹಾಗೂ ಒಂದು ಸಾವಿರ ರೂ. ದಂಡ, ಬೆದರಿಕೆ ಹಾಕಿದ್ದಕ್ಕೆ 506 ಅಡಿಯಲ್ಲಿ ಒಂದು ವರ್ಷ ಕಠಿಣ ಜೈಲು ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಪೊಕ್ಸೋ ಕಾಯ್ದೆಯಡಿ ಒಂದು ವರ್ಷ ಕಠಿಣ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ 5 ಸಾವಿರ ರೂ. ಸರಕಾರ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೊಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

ಇದನ್ನೂ ಓದಿ: ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ | ಅನರ್ಹಗೊಂಡ ಏಳು ಸದಸ್ಯರು ಸ್ಪರ್ಧಿಸುವಂತಿಲ್ಲ: ರಾ. ಚುನಾವಣಾ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News