ಉಡುಪಿ: ಚಲನಚಿತ್ರ ಕಾರ್ಯಾಗಾರ ಸಪ್ತಾಹಕ್ಕೆ ಚಾಲನೆ
ಉಡುಪಿ, ಅ.8: ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ಫಿಲ್ಮ್ ಆ್ಯಂಡ್ ವಿಡಿಯೋ ಟೆಕ್ನಾಲಜಿ, ಉಡುಪಿ ರಂಗಭೂಮಿ ಹಾಗೂ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸ ಲಾದ ಏಳು ದಿನಗಳ ಚಲನಚಿತ್ರ ಕಾರ್ಯಾಗಾರ ಸಪ್ತಾಹಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ಮಾತ ನಾಡಿ, ದೇಶದ ನೂತನ ಶಿಕ್ಷಣ ನೀತಿಯಡಿ ಕೌಶಲ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಯಾವ ಪದವಿ ಪಡೆದರೂ ಕೌಶಲ ಶಿಕ್ಷಣ ಅದರ ಒಂದು ಭಾಗವಾಗಿರಬೇಕು. ಇಂದಿನ ಯುವ ಜನತೆ ಉತ್ತಮ ಜೀವನ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಕೌಶಲ ಶಿಕ್ಷಣ ಸಹಕಾರಿಯಾಗಿದ್ದು, ಈ ಕಾರ್ಯಗಾರದ ಮೂಲಕ ಚಲನಚಿತ್ರ ನಿರ್ಮಾಣದ ಕೌಶಲಗಳನ್ನು ಕಲಿಯಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್, ಪುಣೆ ಐಎಫ್‌ವಿಟಿ ನಿರ್ದೇಶಕ ಎಂ.ಕೆ.ಶಂಕರ್, ಸಿನೆಮಾಟೋ ಗ್ರಾಫರ್ ಶುಭ್ರದತ್ತ ಕೊಲ್ಕತ್ತಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಬಾಲಗಂಗಾಧರ ರಾವ್ ಉಪಸ್ಥಿತರಿದ್ದರು. ಶಾಂಭವಿ ಆಚಾರ್ಯ ವಂದಿಸಿದರು. ಶ್ರೀಪಾದ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.