1947ರಲ್ಲೇ ಭಾರತ ಜೋಡೊ ಮಾಡಿದ್ದರೆ ಗೋವಾ ವಿಮೋಚನೆ ವಿಳಂಬವಾಗುತ್ತಿರಲಿಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್
ಉಡುಪಿ, ಅ.8: ಕಾಂಗ್ರೆಸ್ ಭಾರತ ಜೋಡೊ ಪಾದಯಾತ್ರೆಯನ್ನು 1947ರಲ್ಲಿ ಮಾಡಬೇಕಾಗಿತ್ತು. ಅಂದು ಭಾರತ್ ಜೋಡೊ ಮಾಡಿದ್ದರೆ ಗೋವಾ ವಿಮೋಚನೆ ವಿಳಂಬವಾಗುತ್ತಿರಲಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. 1950ಕ್ಕಾದರೂ ನಮಗೆ ವಿಮೋಚನೆ ಸಿಗುತ್ತಿತ್ತು. 1955ರಲ್ಲಿ ಪೋರ್ಚುಗೀಸರ ವಿರುದ್ಧ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಯುದ್ಧ ಮಾಡಬೇಕಾಯಿತು. ಇದರಿಂದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಅಂದೇ ಭಾರತ ಜೋಡೊ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಈಶಾನ್ಯ ಭಾರತ ಸಂಪೂರ್ಣ ನಮ್ಮ ಅವಿಭಾಜ್ಯ ಅಂಗವಾಗಿ ಇರುತ್ತಿತ್ತು. ಪೂರ್ಣ ಕಾಶ್ಮೀರ ಒಳಗೊಂಡ ಅಖಂಡ ಭಾರತ ಇರುತ್ತಿತ್ತು ಎಂದರು.
ಪ್ರಧಾನ ಮಂತ್ರಿ ಮೋದಿ ಅವರ ದೂರದರ್ಶಿತ್ವ ಕಂಡು ಬೇರೆ ಪಕ್ಷಗಳ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ. ಅಖಂಡ ಭಾರತ, ನವ ಭಾರತದ ಕನಸು ಕಾಣುವ ಯುವಕರಿಗೆ ಪ್ರಧಾನಿ ಪ್ರೇರಣೆಯಾಗಿದ್ದಾರೆ. ಕ್ಲೀನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕನಸಿಗೆ ಕೈಜೋಡಿಸುತ್ತಿದ್ದಾರೆ. ನವ ಭಾರತದ ನಿರ್ಮಾಣದ ಕನಸಿನಿಂದಲೇ ಗೋವಾದಲ್ಲಿ ಅನ್ಯಪಕ್ಷೀಯರು ಬಿಜೆಪಿಗೆ ಬಂದಿದ್ದಾರೆ. ಅಲ್ಲಿ ನಡೆದ ಮ್ಯಾಜಿಕ್ ದೇಶದ ಬೇರೆ ಕಡೆಯೂ ಆಗಬಹುದು ಎಂದು ಅವರು ತಿಳಿಸಿದರು.
ಮಠದಲ್ಲಿ ದೇವರ ದರ್ಶನ ಪಡೆದ ಗೋವಾ ಮುಖ್ಯಮಂತ್ರಿ, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನ ವರದರಾಜ ಭಟ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ವೈದ್ಯ ಡಾ.ಕೃಷ್ಣಪ್ರಸಾದ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದ ವರು ಉಪಸ್ಥಿತರಿದ್ದರು.