ಅ.13ರಂದುನೂತನ ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಲೋಕಾರ್ಪಣೆ

Update: 2022-10-08 15:34 GMT

ಉಡುಪಿ, ಅ.8: ಪುನರ್‌ನಿರ್ಮಾಣಗೊಂಡಿರುವ ಇಂದಿರಾನಗರ ಚಿಟ್ಪಾಡಿಯ ಯುನೈಟೆಡ್ ಬಾಸಿಲ್ ಮಿಷನ್ ಕ್ರಿಸ್ತ ಕಾರಾಣ್ಯ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವು ಇದೇ ಅ.13ರಂದು ನಡೆಯಲಿದೆ ಎಂದು  ಪಾಸ್ಟರ್ ರೆ.ಕುಮಾರ್ ಸಾಲಿನ್ಸ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುಬಿಎಂ ಕ್ರಿಸ್ತ ಕಾರುಣ್ಯ ದೇವಾಲಯವನ್ನು 76 ಬಡಗುಬೆಟ್ಟು ಗ್ರಾಮದ ಚಿಟ್ಪಾಡಿಯಲ್ಲಿ ಕ್ರೈಸ್ತ ಯುವಜನ ಪ್ರಾರ್ಥನಾ ಸಮಾಜದಿಂದ 1983ರಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಇದು ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಯುನೈಟೆಡ್ ಬಾಸೆಲ್ ಮಿಷನ್ ಜಿಲ್ಲಾ ಚರ್ಚ್ ಮಂಡಳಿ ಹಾಗೂ ಟ್ರಸ್ಟ್ ಅಸೋಸಿಯೇಷನ್‌ನ ಆಡಳಿತಕ್ಕೊಳಪಟ್ಟಿದೆ ಎಂದವರು ವಿವರಿಸಿದರು.

ಪರಿಸರದ ಆಸ್ತಿಕ ಜನರ ಶೃದ್ಧಾಭಕ್ತಿಯ ಕೇಂದ್ರವಾಗಿ ಬೆಳೆದಿರುವ ಈ ದೇವಾಲಯವನ್ನು ಊರಪರವೂರ ದಾನಿಗಳು ಹಾಗೂ ಸರಕಾರದ ಅಲ್ಪಸಂಖ್ಯಾತ ಇಲಾಖೆಯ ಸಹಾಯಧನದಿಂದ ಪುನರ್‌ನಿರ್ಮಿಸಲಾಗಿದೆ ಎಂದರು.

ಅ.13ರ ಬೆಳಗ್ಗೆ 9:15ಕ್ಕೆ ಯುಬಿಎಂ ಜಿಲ್ಲಾ ಚರ್ಚ್ ಮಂಡಳಿಯ ಅಧ್ಯಕ್ಷ  ಜಯಪ್ರಕಾಶ್ ಸೈಮನ್ಸ್ ಅವರು ನೂತನ ನವೀಕೃತ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.ಪ್ರತಿಷ್ಠಾ ಆರಾಧನೆಯಲ್ಲಿ ಬಾಸೆಲ್ ಮಿಷನ್‌ನ ಸಭಾಪಾಲಕರು, ಸಭಾ ಹಿರಿಯರು, ಸಭಾ ಸದಸ್ಯರು ಭಾಗಿಯಾಗಲಿದ್ದಾರೆ.  ಮುಂಬೈ ವಾಸೈ ಯುಬಿಎಂ ಕ್ರಿಸ್ತ ಮಹಿಮಾ ಚರ್ಚ್‌ನ ಸಭಾಪಾಲಕರಾದ ರೆ.ಗೋಡ್‌ಫ್ರಿ ಬಿ.ಸೋನ್ಸ್ ಸಂದೇಶ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್, ಮಾಜಿ ಶಾಸಕ ಐವಾನ್ ಡಿಸೋಜ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಿಲಾಸ್ ಇಂಟರ್‌ನೇಷನಲ್ ಸ್ಕೂಲ್‌ನ ಸ್ಥಾಪಕ ಆರ್.ಎಸ್.ಮೊಬೆನ್,ಉದ್ಯಾವರ ಹಲಿಮಾ ಸಾಬ್ಜು ಸಭಾಂಗಣ ಟ್ರಸ್ಟ್‌ನ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ಲ ಜಲೀಲ್, ಜಿಲ್ಲಾ ಕೋ-ಅಪರೇಟಿವ್ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್, ಕ್ರ2ಸ್ತ ಯುವಜನ ಪ್ರಾರ್ಥನಾ ಸಮಾಜದ ಸ್ಥಾಪಕ ಅಧ್ಯಕ್ಷ ಡಬ್ಲ್ಯು.ಡಿ.ಸಾಲಿನ್ಸ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಜಯಪ್ರಕಾಶ್ ಸೈಮನ್, ಕಾರ್ಯದರ್ಶಿ ಸದಾನಂದ ಕಾಂಚನ್, ಖಜಾಂಚಿ ಗ್ಲಾಡ್‌ಸನ್ ಸಾಲಿನ್ಸ್, ಜೋಸೆಫ್ ಸಾಲಿನ್ಸ್,   ಗಾಡ್ವಿನ್ ಪ್ರಭಾಕರ್, ಐವಿ ಶಕುಂತಳಾ ಸೋನ್ಸ್, ಬೆನ್ಸನ್ ಕೋಟ್ಯಾನ್, ಉತ್ತಮ ಕುಮಾರ್ ಅಮ್ಮಣ್ಣ, ಪ್ರವೀಣ್ ಬಂಗೇರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News