ಬ್ರಿಟನ್ ನ ಸಾಲದ ಹೊರೆ ತಗ್ಗಿಸಬೇಕಿದ್ದರೆ 2 ಲಕ್ಷ ಉದ್ಯೋಗ ಕಡಿತ ಅನಿವಾರ್ಯ: ವರದಿ

Update: 2022-10-08 17:19 GMT

ಲಂಡನ್, ಅ.8: ಬ್ರಿಟನ್ ಸರಕಾರದ ಸಾಲದ ಹೊರೆ ತಗ್ಗಬೇಕಿದ್ದರೆ ಮುಂದಿನ ಕೆಲ ವರ್ಷಗಳಲ್ಲಿ 2 ಲಕ್ಷದಷ್ಟು ಸರಕಾರಿ ಉದ್ಯೋಗ ಕಡಿತಗೊಳಿಸುವ ಅನಿವಾರ್ಯತೆಯಿದೆ ಎಂದು ಇನ್ಸ್ಟಿಟ್ಯೂಟ್ ಫಾರ್ ಫಿಸ್ಕಲ್ ಸ್ಟಡೀಸ್(ಐಎಫ್ಎಸ್)ನ ವರದಿ ಹೇಳಿದೆ.

ಸಾರ್ವಜನಿಕ ವಲಯದ ವೇತನಗಳ ವೆಚ್ಚ ಈ ವರ್ಷ 5% ಹೆಚ್ಚಲಿದ್ದು ಇದು ಹಣದುಬ್ಬರ ಪ್ರಮಾಣದ 50%ದಷ್ಟು ಆಗಿದೆ ಮತ್ತು 2021ರ ಬಜೆಟ್ನಲ್ಲಿ ನಿಗದಿಗೊಳಿಸಿದ ವೆಚ್ಚದ ಯೋಜನೆಗಿಂತ ಹೆಚ್ಚಾಗಿದೆ. ಹೆಚ್ಚುವರಿ ಸಾಲ ಪಡೆಯದೆ ಸರಕಾರಿ ಉದ್ಯೋಗಿಗಳಿಗೆ ವೇತನ ಪಾವತಿಗೆ ಬ್ರಿಟನ್ ಸರಕಾರ ಈ ವರ್ಷವೇ  46,386 ಕೋಟಿ ರೂ. ಹೆಚ್ಚುವರಿ ಉಳಿತಾಯ ಸಂಗ್ರಹಿಸಬೇಕಾಗಿದೆ ಎಂದು ವರದಿ ಹೇಳಿದೆ. ತೆರಿಗೆ ಕಡಿತದ ವಾಗ್ದಾನ ಮಾಡಿರುವ ಬ್ರಿಟನ್ನ ವಿತ್ತಸಚಿವ ಕ್ವಾಸಿ ಕ್ವರ್ಟೆಂಗ್ ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಭಾರೀ ಸವಾಲನ್ನು ಎದುರಿಸಬೇಕಾಗಿದೆ. ಸಾಲ ಪಡೆಯದೆ ಸರಕಾರಿ ಉದ್ಯೋಗಿಗಳಿಗೆ ವೇತನ ಪಾವತಿಸಬೇಕಿದ್ದರೆ ಈ ವರ್ಷ ಸುಮಾರು 1 ಲಕ್ಷ ಉದ್ಯೋಗ ಕಡಿತ ಅನಿವಾರ್ಯ. 2023ರಲ್ಲಿ ಹಣದುಬ್ಬರದೊಂದಿಗೆ ವೇತನವೂ ಹೆಚ್ಚಿದರೆ, ವೆಚ್ಚವನ್ನು ನಿಯಂತ್ರಣದಲ್ಲಿ ಇರಿಸಲು ಹೆಚ್ಚುವರಿ 1 ಲಕ್ಷ ಉದ್ಯೋಗ ಕಡಿತ ಅನಿವಾರ್ಯ ಎಂದು ಐಎಫ್ಎಸ್ ಹೇಳಿದೆ.

ಇಲಾಖೆಗಳಿಗೆ `ದಕ್ಷತೆಗೆ' ಆದ್ಯತೆ ನೀಡುವಂತೆ ಸರಕಾರ ಸೂಚಿಸಿದೆ. ಇದು ಉದ್ಯೋಗ ಕಡಿತದ ಕೋಡ್ವರ್ಡ್ ಎಂದೇ ಭಾವಿಸಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಉದ್ಯೋಗಿಗಳ ಸಂಖ್ಯೆಯಲ್ಲಿ 2,50,000ದಷ್ಟು ಹೆಚ್ಚಳವಾಗಿರುವುದರಿಂದ ಉದ್ಯೋಗ ಕಡಿತಕ್ಕೆ ಸಂಭಾವ್ಯ ಅವಕಾಶವಿದೆ. 5 ಲಕ್ಷದಷ್ಟು ನಾಗರಿಕ ಸೇವಾ ಪಡೆಯಲ್ಲಿ ಐದನೇ ಒಂದರಷ್ಟು ಕಡಿತ ಮಾಡುವ ಬಗ್ಗೆ ಸರಕಾರ ಈಗಾಗಲೇ ಗಂಭೀರ ಯೋಜನೆಗಳನ್ನು ಮುಂದಿರಿಸಿದೆ. ಬ್ಯಾಂಕ್ ಆಫ್ ಇಂಗ್ಲೆAಡಿನ ವಾರ್ಷಿಕ ಸಾಲ ಬಡ್ಡಿ ಬಿಲ್ ಅನ್ನು ಗಮನಾರ್ಹಮಟ್ಟದಲ್ಲಿ ಕಡಿಮೆಗೊಳಿಸುವ ಯೋಜನೆಯನ್ನು ಸರಕಾರ ಪರಿಶೀಲಿಸುತ್ತಿದೆ.

ಈ ಮಧ್ಯೆ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ನರ್ಸ್ ಹಾಗೂ ಶಿಕ್ಷಕರು ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಉದ್ಯೋಗಿಗಳು ಮುಷ್ಕರದ ಬೆದರಿಕೆ ಒಡ್ಡಿರುವುದು ಸರಕಾರದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಆದ್ದರಿಂದ ವಿತ್ತಸಚಿವ ಕ್ವಾಸಿ ಕ್ವರ್ಟೆಂಗ್ಗೆ ಸುಲಭದ ಆಯ್ಕೆಯಿಲ್ಲ . ಹೆಚ್ಚುವರಿ ಅನುದಾನವಿಲ್ಲದೆ  ವೇತನ ಹೆಚ್ಚಿಸುವ ಘೋಷಣೆಯು ಇಲಾಖೆಯ ಬಜೆಟ್ನ ಮೇಲೆ ಅಗಾಧ ಹೊರೆಯಾಗಲಿದೆ ಮತ್ತು ಇನ್ಯಾವುದೋ ಕ್ಷೇತ್ರದಲ್ಲಿ ಕಡಿತದ ಅಗತ್ಯವನ್ನು ಅನಿವಾರ್ಯಗೊಳಿಸಲಿದೆ ಎಂದು ಐಎಫ್ಎಸ್ನ ಸಂಶೋಧಕ ಅರ್ಥಶಾಸ್ತ್ರಜ್ಞ ಬೀ ಬೊಯ್ಲ್ಯೂ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News