20 ರೂ.ಗಾಗಿ ಜಗಳ: ಆಪ್ ಸರಕಾರ ಮತ್ತು ಬಿಜೆಪಿ ಎಂಸಿಡಿ ನಡುವೆ ಸಂಘರ್ಷದಿಂದ ಕಂಗಾಲಾಗಿರುವ ಗೋವುಗಳು

Update: 2022-10-09 16:22 GMT

ಹೊಸದಿಲ್ಲಿ,ಅ.9: ಗುಜರಾತಿನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ದಿಲ್ಲಿಯಲ್ಲಿರುವಂತೆ ಪ್ರತಿ ಹಸುವಿನ ಪೋಷಣೆಗಾಗಿ ದಿನಕ್ಕೆ 40 ರೂ.ಭತ್ಯೆಯನ್ನು ಜಾನುವಾರುಗಳ ಮಾಲಿಕರಿಗೆ ನೀಡುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇತ್ತೀಚಿಗೆ ಹೇಳಿದ್ದಾರೆ. ಆದರೆ ದಿಲ್ಲಿಯಲ್ಲಿ ಆಪ್ ಸರಕಾರ ಮತ್ತು ಬಿಜೆಪಿ ನಡುವಿನ ಕಚ್ಚಾಟದಿಂದಾಗಿ ಅಲ್ಲಿಯ ಗೋಶಾಲೆಗಳು ಅತಂತ್ರಗೊಂಡಿವೆ.

ಸರಕಾರದಿಂದ ಬಾಕಿಯಾಗಿರುವ ಹಣ,ಹಣಕಾಸಿನ ಕೊರತೆ, ಹೆಚ್ಚುತ್ತಿರುವ ಗೋಶಾಲೆಗಳ ನಿರ್ವಹಣೆ ವೆಚ್ಚದ ಕುರಿತು ಆಪ್ ನೇತೃತ್ವದ ದಿಲ್ಲಿ ಸರಕಾರ ಮತ್ತು ಬಿಜೆಪಿ ಆಡಳಿತದ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ನಡುವೆ ನಿರಂತರ ವಾಗ್ವಾದಗಳಿಂದಾಗಿ ಗೋಶಾಲೆಗಳ ಮಾಲಿಕರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಹಸುಗಳು ತುಂಬಿರುವ ಗೋಶಾಲೆಗಳನ್ನು ನಿರ್ವಹಿಸಲು ಹೆಚ್ಚಿನ ಸಾಲಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ.

ದಿಲ್ಲಿಯಲ್ಲಿ ಸರಕಾರಿ ಸಂಯೋಜಿತ ನಾಲ್ಕು ಗೋಶಾಲೆಗಳಿದ್ದು, ಗಾಯಗೊಂಡಿರುವ,ಪರಿತ್ಯಕ್ತ,ಬಿಡಾಡಿ ಹಸುಗಳನ್ನು ಎಂಸಿಡಿ ರಕ್ಷಿಸಿ ಇಲ್ಲಿಗೆ ಸಾಗಿಸುತ್ತದೆ. ಈ ಗೋಶಾಲೆಗಳು ಪ್ರತಿ ಹಸುವಿಗೆ ದಿನಕ್ಕೆ 20 ರೂ.ಗಳ ಪೋಷಣೆ ಭತ್ಯೆಯನ್ನು ಸರಕಾರದಿಂದ ಪಡೆಯುತ್ತಿವೆ,ಆದರೆ ಎಂಸಿಡಿ ನೀಡಬೇಕಿದ್ದ 20 ರೂ.ಗಳ ಪೋಷಣೆ ಭತ್ಯೆ 2018ರಿಂದ ಬಾಕಿಯಿದೆ. ಪ್ರತಿ ಹಸುವಿಗೆ ಪ್ರತಿದಿನ ಒಟ್ಟು 40 ರೂ.ಗಳ ಸರಕಾರಿ ನೆರವು ಗೋಶಾಲೆಗಳ ಮಾಲಿಕರಿಗೆ ದೊರೆಯಬೇಕಿತ್ತು.

‘ಹಸುವೊಂದರ ಪೋಷಣೆಗಾಗಿ ಪ್ರತಿ ದಿನ ಸುಮಾರು 103 ರೂ.ವೆಚ್ಚವಾಗುತ್ತಿದೆ,ಅಂದರೆ ಇಲ್ಲಿರುವ 8,500 ಗೋವುಗಳಿಗೆ ಒಟ್ಟು ಎಂಟು ಲ.ರೂ.ಅಗತ್ಯವಿದೆ. ಇದರ ಜೊತೆಗೆ ಸಿಬ್ಬಂದಿಗಳ ವೇತನ,ಆಸ್ಪತ್ರೆ ಬಿಲ್‌ಗಳು,ಔಷಧಿಗಳು,ವಿದ್ಯುತ್‌ನಂತಹ ಹೆಚ್ಚುವರಿ ವೆಚ್ಚಗಳೂ ಇವೆ. ಗೋಶಾಲೆಗೆ ತರಲಾಗುತ್ತಿರುವ ಹಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 300 ಜನರ ತಂಡವು ಅವುಗಳನ್ನು ನೋಡಿಕೊಳ್ಳುತ್ತಿದೆ. ದಿಲ್ಲಿ ಸರಕಾರವು ತನ್ನ ಪಾಲಿನ ಹಣವನ್ನು ನಮಗೆ ರವಾನಿಸುತ್ತಿದೆ,ಆದರೆ ಕಳೆದ 3-4 ವರ್ಷಗಳಿಂದಲೂ ಎಂಸಿಡಿಯಿಂದ ಹಣ ಬಂದಿಲ್ಲ. ಈಗ ಎಲ್ಲದಕ್ಕೂ ನಾವು ದೇಣಿಗೆಗಳನ್ನು ಅವಲಂಬಿಸಿದ್ದೇವೆ ’ ಎಂದು ಶ್ರೀಕೃಷ್ಣ ಗೋಶಾಲಾದ ಜನರಲ್ ಮ್ಯಾನೇಜರ್ ವಿಜಯೇಂದ್ರ ಧ್ಯಾನಿ ಅಳಲು ತೋಡಿಕೊಂಡರು.

ಗೋಶಾಲೆಗಳು ದಿಲ್ಲಿ ಸರಕಾರದ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿವೆ. ಅದು ಅವುಗಳಿಗೆ ಹಣದ ಹಂಚಿಕೆ ಮಾಡುತ್ತದೆ. ಕಾಯ್ದೆಯಂತೆ ಗೋಶಾಲೆಗಳ ಸಂಪೂರ್ಣ ಜವಾಬ್ದಾರಿ ದಿಲ್ಲಿ ಸರಕಾರದ್ದಾಗಿದೆ ಎಂದು ಎಂಸಿಡಿಯ ಪಶು ಇಲಾಖೆಯ ನಿರ್ದೇಶಕ ಡಾ.ವಿ.ಕೆ.ಸಿಂಗ್ ಹೇಳಿದ್ದಾರೆ.

 ಇದನ್ನು ಅಲ್ಲಗಳೆದಿರುವ ದಿಲ್ಲಿ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಡಾ.ರಾಕೇಶ ಸಿಂಗ್ ಅವರು,‘ಗೋಶಾಲೆಗಳು ನಮಗೆ ಸೇರಿರಬಹುದು,ಆದರೆ ಅಲ್ಲಿ ಹಸುಗಳನ್ನು ತಂದು ತುಂಬುತ್ತಿರುವುದು ಎಂಸಿಡಿ. ಹೀಗಾಗಿ ಅದು ಎಲ್ಲ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ’ಎಂದಿದ್ದಾರೆ.

ಈ ನಡುವೆ ಹಣ ಪಾವತಿಸದ್ದಕ್ಕಾಗಿ ಗೋಶಾಲೆಗಳ ಮಾಲಿಕರು ಎಂಸಿಡಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದಿಲ್ಲಿ ಸರಕಾರವನ್ನೂ ಅವರು ಪ್ರಕರಣದಲ್ಲಿ ಕಕ್ಷಿಯಾಗಿಸಿದ್ದಾರೆ.

ನಗರದ ಮಧ್ಯ ಹಲವಾರು ಅಕ್ರಮ ಡೇರಿಗಳಿವೆ. ಅಲ್ಲಿಯ ಹಸುಗಳು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಅವುಗಳನ್ನು ರಸ್ತೆಗಳಲ್ಲಿ ತೊರೆಯಲಾಗುತ್ತದೆ. ಇಂತಹ ಡೇರಿಗಳನ್ನು ನಿಯಂತ್ರಿಸಲು ಬಿಜೆಪಿ ನೇತೃತ್ವದ ಎಂಸಿಡಿ ವಿಫಲಗೊಂಡಿದೆ ಎಂದು ಆಪ್ ದೂರಿದ್ದರೆ,ಇದೆಲ್ಲ ಅಗ್ಗದ ರಾಜಕೀಯ ಎಂದು ಬಿಜೆಪಿ ತಳ್ಳಿಹಾಕಿದೆ. ಒಟ್ಟಾರೆಯಲ್ಲಿ ಇವರೆಡರ ನಡುವಿನ ಹಗ್ಗಜಗ್ಗಾಟದಿಂದ ಗೋಶಾಲೆಗಳು ಸಂಕಷ್ಟದಿಂದ ಒದ್ದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News