×
Ad

ರಾಹುಲ್ ಗಾಂಧಿ ಪೋಸ್ಟರ್ ಗೆ ಶೂಗಳನ್ನು ಎಸೆದು ಮಸಿ ಬಳಿದ ಬಿಜೆಪಿ ಕಾರ್ಯಕರ್ತರು

Update: 2022-10-09 20:35 IST
PHOTO SOURCE: TWITTER

ಮುಂಬೈ,ಅ.9: ವಿ.ಡಿ.ಸಾವರ್ಕರ್ ಬ್ರಿಟಿಷರಿಗೆ ನೆರವಾಗಿದ್ದರು ಮತ್ತು ಅದಕ್ಕಾಗಿ ಹಣವನ್ನು ಪಡೆದುಕೊಂಡಿದ್ದರು ಎಂದು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಯ ವಿರುದ್ಧ ಇಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಅವರ ಪೋಸ್ಟರ್‌ಗೆ ಶೂಗಳನ್ನೆಸೆದು,ಮಸಿ ಬಳಿದಿದ್ದಾರೆ.

ಸಾವರ್ಕರ್‌ಗೆ ಅವಮಾನಿಸಿದ್ದನ್ನು ವಿರೋಧಿಸಿ ಬಿಜೆಪಿ ನಾಯಕ ರಾಮ ಕದಮ್ ಅವರು ರವಿವಾರ ಬೆಳಿಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ‘ಜೂತಾ ಮಾರೋ ಆಂದೋಲನ್’ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿಯವರು ಮಾಡಿರುವ ಅವಮಾನಕಾರಿ ಟೀಕೆಗಳು ವಿಷಾದನೀಯ ಮತ್ತು ಆಘಾತಕಾರಿಯಾಗಿವೆ. ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು. ಅವರು ಮತ್ತೆ ಮತ್ತೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು,ಸರ್ವಥಾ ಸ್ವೀಕಾರಾರ್ಹವಲ್ಲ ಎಂದು ಕದಮ್ ಹೇಳಿದರು.

 ಈ ಬಗ್ಗೆ ಉದ್ಧವ ಠಾಕ್ರೆ ನಿಲುವೇನು? ಅವರೇಕೆ ಏನನ್ನೂ ಹೇಳುತ್ತಿಲ್ಲ, ಏಕೆ ರಾಹುಲ್‌ರನ್ನು ಟೀಕಿಸುತ್ತಿಲ್ಲ? ಅವರು ಹಿಂದುತ್ವವನ್ನು ತೊರೆದಿದ್ದಾರೆ ಮತ್ತು ಬಾಳಾಸಾಹೇಬ ಠಾಕ್ರೆಯವರ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಶನಿವಾರ ಕರ್ನಾಟಕದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್,‘ಕಾಂಗ್ರೆಸ್ ಪಕ್ಷದ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿದ್ದರು,ವರ್ಷಗಟ್ಟಲೆ ಕಾಲ ಜೈಲುವಾಸ ಅನುಭವಿಸಿದ್ದರು.

ನಾನು ಇತಿಹಾಸದಲ್ಲಿ ಓದಿರುವಂತೆ ಆರೆಸ್ಸೆಸ್ ಬ್ರಿಟಿಷರಿಗೆ ನೆರವಾಗಿತ್ತು, ಸಾವರ್ಕರ್ ಬ್ರಿಟಿಷರಿಂದ ಹಣ ಪಡೆಯುತ್ತಿದ್ದರು. ಇವೆಲ್ಲ ಬಿಜೆಪಿಯೂ ಮುಚ್ಚಿಡಲಾಗದ ಐತಿಹಾಸಿಕ ಸತ್ಯಗಳಾಗಿವೆ ’ಎಂದು ಹೇಳಿದ್ದರು.

ಫಡ್ನವೀಸ್ ಖಂಡನೆ

ಬಿಜೆಪಿ ಮತ್ತು ಸಾವರ್ಕರ್ ವಿರುದ್ಧ ಟೀಕೆಗಾಗಿ ರಾಹುಲ್ ವಿರುದ್ಧ ದಾಳಿ ನಡೆಸಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,ರಾಹುಲ್‌ಗೆ ಭಾರತ ಮತ್ತು ಕಾಂಗ್ರೆಸ್‌ನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಅವರು ಮತ್ತೆ ಸ್ವಾತಂತ್ರವೀರ ಸಾವರ್ಕರ್‌ರನ್ನು ಅವಮಾನಿಸಿದ್ದಾರೆ. ಅವರು ಬ್ರಿಟಿಷರ ಏಜೆಂಟ್ ಆಗಿದ್ದರು ಮತ್ತು ಹಣವನ್ನು ಪಡೆದಿದ್ದರು ಎಂದು ಅವರು ನಿರಂತರವಾಗಿ ಹೇಳುತ್ತಿದ್ದಾರೆ,ಅವರ ಹೇಳಿಕೆಯನ್ನು ತಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News