ಶಿಂದೆ ಬಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಅದು ಬಿಜೆಪಿಯ ಬದಲಿ ಪ್ರತಿನಿಧಿಯಾಗಿದೆ

Update: 2022-10-09 15:23 GMT
ಉದ್ಧವ್ ಠಾಕ್ರೆ (File Photo: PTI)

ಹೊಸದಿಲ್ಲಿ,ಅ.9: ಚುನಾವಣಾ ಆಯೋಗವು ನ.3ರಂದು ನಡೆಯಲಿರುವ ಅಂಧೇರಿ (ಪೂರ್ವ) ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಸ್ತಂಭನಗೊಳಿಸುವ ಮುನ್ನ ಶನಿವಾರ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಅದಕ್ಕೆ ಬರೆದಿದ್ದ ಪತ್ರದಲ್ಲಿ,ಪಕ್ಷದ ಸಾಂಸ್ಥಿಕ ಮತ್ತು ಶಾಸಕಾಂಗ ಘಟಕದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರು/ಪ್ರಾಥಮಿಕ ಸದಸ್ಯರಲ್ಲಿ ತಾನು ಅಗಾಧ ಬಹುಮತವನ್ನು ಹೊಂದಿರುವುದಾಗಿ ತಿಳಿಸಿದೆ.

ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮತ್ತು ಅವಸರದ ಕ್ರಮಗಳನ್ನು ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿರುವ ಉದ್ಧವ ಬಣವು,ಶಿಂದೆ ಬಣವು ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸುತ್ತಿಲ್ಲ,ಹೀಗಾಗಿ ಯಾವುದೇ ತುರ್ತು ಅಗತ್ಯವಿಲ್ಲ ಎಂದು ತಿಳಿಸಿದೆ. ಶಿಂದೆ ಬಣವು ಉಪಚುನಾವಣೆಯಲ್ಲಿ ‘ಬಿಜೆಪಿಯ ಪ್ರಾಕ್ಸಿ (ಬದಲಿ ಪ್ರತಿನಿಧಿ)’ಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅದು ಹೇಳಿದೆ. ಉಪಚುನಾವಣೆಯ ಹಿನ್ನೆಲೆಯಲ್ಲಿ ಶಿವಸೇನೆಯ ಚುನಾವಣಾ ಚಿಹ್ನೆಯ ಮೇಲೆ ಶಿಂದೆ ಬಣದಿಂದ ಹಕ್ಕು ಮಂಡನೆಗೆ ಶನಿವಾರದೊಳಗೆ ಉತ್ತರಿಸುವಂತೆ ಆಯೋಗವು ಉದ್ಧವ ಬಣಕ್ಕೆ ಸೂಚಿಸಿತ್ತು. 26 ಪುಟಗಳ ತನ್ನ ಉತ್ತರದಲ್ಲಿ ಉದ್ಧವ ಬಣವು ತನ್ನ ನಾಯಕರು 14 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎಂದು ತಿಳಿಸಿದೆ.

ತನಗೆ 40 ಶಾಸಕರ ಬೆಂಬಲವಿದೆ ಎಂಬ ಶಿಂದೆ ಹೇಳಿಕೆಯನ್ನು ಪ್ರತಿರೋಧಿಸಿರುವ ಉದ್ಧವ ಬಣವು,ಅರ್ಜಿದಾರರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾದ 40 ಶಾಸಕರು ಅನರ್ಹತೆಯನ್ನು ಎದುರಿಸುತ್ತಿದ್ದಾರೆ ಮತ್ತು ಅನರ್ಹತೆ ಅರ್ಜಿಗಳು ಬಾಕಿಯಿವೆ ಎಂದು ತಿಳಿಸಿದೆ. ತಾನು ಶಿವಸೇನೆಯ ಎಲ್ಲ ಹನ್ನೆರಡೂ ವಿಧಾನ ಪರಿಷತ್ ಸದಸ್ಯರು ಮತ್ತು ಏಳು ಸಂಸತ್ ಸದಸ್ಯರ ಬೆಂಬಲವನ್ನು ಹೊಂದಿದ್ದೇನೆ. ಶಿಂದೆಯವರನ್ನು ಬೆಂಬಲಿಸಿರುವ 12 ಸಂಸದರು ಅನರ್ಹತೆಯನ್ನು ಎದುರಿಸುತ್ತಿದ್ದಾರೆ ಮತ್ತು ಅನರ್ಹತೆ ಅರ್ಜಿಗಳು ಬಾಕಿಯಿವೆ ಎಂದು ತಿಳಿಸಿರುವ ಉದ್ಧವ ಬಣವು,ಪಕ್ಷದ ಎಲ್ಲ ಮೂವರು ರಾಜ್ಯಸಭಾ ಸದಸ್ಯರೂ ತನ್ನನ್ನು ಬೆಂಬಲಿಸಿದ್ದಾರೆ ಎಂದು ಹೇಳಿದೆ.
 
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ 234 ಸದಸ್ಯರ ಪೈಕಿ 160 ಸದಸ್ಯರು ಮತ್ತು ಪಕ್ಷದ 29 ರಾಜ್ಯ ಘಟಕಗಳ ಮುಖ್ಯಸ್ಥರ ಪೈಕಿ 18 ಜನರು ಉದ್ಧವ ಠಾಕ್ರೆ ಬಣವನ್ನು ಬೆಂಬಲಿಸಿದ್ದಾರೆ. ಪಕ್ಷದ 12 ಲಕ್ಷ ಪ್ರಾಥಮಿಕ ಸದಸ್ಯರ ಪೈಕಿ 10 ಲ.ಕ್ಕೂ ಅಧಿಕ ಜನರು ಉದ್ಧವ ಜೊತೆಯಲ್ಲಿದ್ದು,1.66 ಲ.ಸದಸ್ಯರು ಶಿಂದೆಯವರನ್ನು ಬೆಂಬಲಿಸುತ್ತಿದ್ದಾರೆ. ಸಂಘಟನೆಯ ಹೆಚ್ಚುಕಡಿಮೆ ಎಲ್ಲ 2.62 ಲ.ಪದಾಧಿಕಾರಿಗಳ ಬೆಂಬಲವೂ ತನಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಶಿಂದೆ ಬಣವು ಪಕ್ಷದ ಸದಸ್ಯರ ಬೆಂಬಲವನ್ನು ತೋರಿಸಲು ಸಲ್ಲಿಸಿರುವ ದಾಖಲೆಗಳು ಸುಳ್ಳು ಮತ್ತು ಕಲ್ಪಿತವಾಗಿವೆ ಎಂದು ತಿಳಿಸಿರುವ ಪತ್ರವು, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಸಂವಿಧಾನದ ಪ್ರಕಾರ ಉದ್ಧವ ಠಾಕ್ರೆ ಈಗಲೂ ಅದರ ಅಧ್ಯಕ್ಷರಾಗಿದ್ದಾರೆ ಮತ್ತು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
ಪಕ್ಷದ ಪ್ರಾಥಮಿಕ ಸದಸ್ಯರಿಂದ 10 ಲ.ಕ್ಕೂ ಅಧಿಕ ಅಫಿಡವಿಟ್ಗಳು ಮತ್ತು ಈಗಾಗಲೇ ದಿಲ್ಲಿಯಲ್ಲಿರುವ 2.5 ಲ.ಸದಸ್ಯತ್ವ ನಮೂನೆಗಳನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಉದ್ಧವ ಬಣವು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News