ಜಮ್ಮು-ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಪಾತ್ರಕ್ಕೆ ಜರ್ಮನಿಯ ಕರೆಯು ಭಯೋತ್ಪಾದನೆ ಬಲಿಪಶುಗಳಿಗೆ ಘೋರ ಅನ್ಯಾಯ: ಭಾರತ

Update: 2022-10-09 17:32 GMT
 S Jaishanka(PHOTO:PTI)

ಹೊಸದಿಲ್ಲಿ,ಅ.9: ಜಮ್ಮು-ಕಾಶ್ಮೀರದ ಸ್ಥಿತಿಯಲ್ಲಿ ವಿಶ್ವಸಂಸ್ಥೆಯ ಹಸ್ತಕ್ಷೇಪಕ್ಕಾಗಿ ಜರ್ಮನಿಯ ಕರೆಯನ್ನು ವಿರೋಧಿಸಿರುವ ಭಾರತವು,ಈ ಹೇಳಿಕೆಯು ಭಯೋತ್ಪಾದನೆಯ ಬಲಿಪಶುಗಳಿಗೆ ಘೋರ ಅನ್ಯಾಯವಾಗಿದೆ ಎಂದು ಹೇಳಿದೆ.

‘ಕಾಶ್ಮೀರದಲ್ಲಿಯ ಪರಿಸ್ಥಿತಿಗೆ ಸಂಬಂಧಿಸಿದಂತೆ ಜರ್ಮನಿಯು ಪಾತ್ರವೊಂದನ್ನು ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಆದ್ದರಿಂದ ಈ ಪ್ರದೇಶದಲ್ಲಿ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವಿಶ್ವಸಂಸ್ಥೆಯ ಹಸ್ತಕ್ಷೇಪವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ ’ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೀನಾ ಬೇರ್ಬಾಕ್ ಅವರು ಅ.7ರಂದು ಬರ್ಲಿನ್‌ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಹೇಳಿದ್ದರು.

ವಿಶ್ವ ಸಮುದಾಯದ,ಆತ್ಮಸಾಕ್ಷಿಯುಳ್ಳ ಎಲ್ಲ ಸದಸ್ಯರು ಅಂತರರಾಷ್ಟ್ರೀಯ ಭೀತಿವಾದವನ್ನು,ವಿಶೇಷವಾಗಿ ಗಡಿಯಾಚೆಯ ಭಯೋತ್ಪಾದನೆಯನ್ನು ಖಂಡಿಸುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು, ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರವು ದಶಕಗಳಿಂದಲೂ ಇಂತಹ ಭೀತಿವಾದದ ನೋವನ್ನು ಅನುಭವಿಸಿದೆ ಮತ್ತು ಅದು ಈಗಲೂ ಮುಂದುವರಿದಿದೆ ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಈಗಲೂ 26/11ರ ದಾಳಿಗಳಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಬೆನ್ನತ್ತಿವೆ ಎಂದೂ ಭಾರತವು ಹೇಳಿದೆ.

  ಸ್ವಹಿತಾಸಕ್ತಿ ಅಥವ ಉದಾಸೀನತೆಯಿಂದಾಗಿ ದೇಶಗಳು ಇಂತಹ ಅಪಾಯಗಳನ್ನು ಗುರುತಿಸದಿದ್ದಾಗ ಅವು ಶಾಂತಿಯ ಹೋರಾಟವನ್ನು ದುರ್ಬಲಗೊಳಿಸುತ್ತವೆ,ಅದನ್ನು ಉತ್ತೇಜಿಸುವುದಿಲ್ಲ ಎಂದು ಬಾಗ್ಚಿ ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅ.7ರಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ ಝರ್ದಾರಿ,ವಿಶ್ವಸಂಸ್ಥೆಯ ನಿರ್ಣಯಗಳಿಗೆ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಮ್ಮು-ಕಾಶ್ಮೀರ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳದೆ ದ.ಏಶ್ಯಾದಲ್ಲಿ ಶಾಂತಿ ಸಾಧ್ಯವಿಲ್ಲ ಎಂದು ಹೇಳಿದ್ದರು.

ಕಾಶ್ಮೀರವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಯಾವುದೇ ಮೂರನೇ ದೇಶದ ಪಾತ್ರಕ್ಕೆ ಅವಕಾಶವಿಲ್ಲ ಎನ್ನುವುದು ಭಾರತದ ನಿಲುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News