×
Ad

ಪ್ರಧಾನಿಯಾಗುವ ಅವಕಾಶವನ್ನು ಎರಡು ಬಾರಿ ಕಳೆದುಕೊಂಡಿದ್ದ ಮುಲಾಯಂ ಸಿಂಗ್ ಯಾದವ್

Update: 2022-10-10 20:27 IST
ಮುಲಾಯಂ ಸಿಂಗ್ ಯಾದವ್ (PTI)

ಹೊಸದಿಲ್ಲಿ: ಇಂದು(ಅ.10) ನಿಧನರಾದ ಸಮಾಜವಾದಿ ಪಕ್ಷ (SP)ದ ವರಿಷ್ಠ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ರಾಜಕೀಯ ವೃತ್ತಿಜೀವನದಲ್ಲಿ ಖ್ಯಾತಿಯನ್ನು ಗಳಿಸಿದ್ದರು. ಅವರು ಮೂರು ಸಲ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು ಮಾತ್ರವಲ್ಲ,1996ರಿಂದ 1998ರವರೆಗೆ ಕೇಂದ್ರದಲ್ಲಿ ರಕ್ಷಣಾ ಸಚಿವರೂ ಆಗಿದ್ದರು.

ಮಾಜಿ ಕುಸ್ತಿಪಟುವಾಗಿದ್ದ ಮುಲಾಯಂ ಅವರು ಭಾರತೀಯ ರಾಜಕೀಯ ಕ್ಷೇತ್ರದ ‘ಪೈಲ್ವಾನ್’ಎಂದೂ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು. ಆದರೆ ಅವರು ಎರಡು ಸಲ ಭಾರತದ ಪ್ರಧಾನಿ ಹುದ್ದೆಗೇರುವ ಸಮೀಪಕ್ಕೆ ಬಂದಿದ್ದರು ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.

1996-98ರ ಅವಧಿಯಲ್ಲಿ ಎಚ್.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಅವರ ಸರಕಾರಗಳಲ್ಲಿ ಮುಲಾಯಂ ರಕ್ಷಣಾ ಸಚಿವರಾಗಿದ್ದರು. ನಿರ್ಣಾಯಕ ವ್ಯೂಹಾತ್ಮಕ ವಿಷಯಗಳಲ್ಲಿ ಅವರ ಕಠಿಣ ನಿರ್ಧಾರಗಳು ಅವರಿಗೆ ರಕ್ಷಣಾ ವಲಯಗಳಲ್ಲಿ ‘ಅತ್ಯುತ್ತಮ ರಕ್ಷಣಾ ಸಚಿವ ’ಎಂಬ ಖ್ಯಾತಿಯನ್ನು ಗಳಿಸಿಕೊಟ್ಟಿದ್ದವು.

1990ರ ದಶಕದಲ್ಲಿ ಮುಲಾಯಂ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಕಳೆದುಕೊಂಡಾಗ ಅನೇಕರು ಅವರ ರಾಜಕೀಯ ಭವಿಷ್ಯದ ಕುರಿತು ಪ್ರಶ್ನಿಸಲು ಆರಂಭಿಸಿದ್ದರು ಮತ್ತು ಮುಲಾಯಂ ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಪಾತ್ರವನ್ನು ಅರಸಿ ದಿಲ್ಲಿಗೆ ತನ್ನ ನೆಲೆಯನ್ನು ಬದಲಿಸಿದ್ದರು.

1996ರ ಸಾರ್ವತ್ರಿಕ ಚುನಾವಣೆಗಳಲ್ಲಿ ಎಸ್‌ಪಿ 17 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. 13 ದಿನಗಳ ಅಟಲ್ ಬಿಹಾರಿ ವಾಜಪೇಯಿ ಸರಕಾರ ಪತನಗೊಂಡ ಬಳಿಕ ದೇವೇಗೌಡರು ಪ್ರಧಾನಿಯಾಗಿದ್ದರು ಮತ್ತು ಮುಲಾಯಂ ರಕ್ಷಣಾ ಸಚಿವರ ಹುದ್ದೆಗೇರಿದ್ದರು.

ರಾಜಕೀಯ ವಲಯಗಳಲ್ಲಿ ‘ನೇತಾಜಿ’ಎಂದೇ ಪರಿಚಿತರಾಗಿದ್ದ ಮುಲಾಯಂ ಅವರು ಸಿಯಾಚಿನ್ ಗ್ಲೇಸಿಯರ್‌ಗೆ ಭೇಟಿ ನೀಡಿದ್ದ ದೇಶದ ಮೊದಲ ರಕ್ಷಣಾ ಸಚಿವರಾಗಿದ್ದರು. ರಕ್ಷಣಾ ಸಚಿವರಾಗಿ ತನ್ನ ಅಧಿಕಾರಾವಧಿಯಲ್ಲಿ ಪಶ್ಚಿಮ ಮುಂಚೂಣಿಯಲ್ಲಿ ಬಂದೂಕುಗಳು ಮೌನವಾಗಿರಲು ಅವರು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. ಚೀನಿ ಸೇನೆಯನ್ನು ವಾಸ್ತವ ನಿಯಂತ್ರಣ ರೇಖೆಯ ಕೆಲವು ಕಡೆಗಳಲ್ಲಿ ಸುಮಾರು ನಾಲ್ಕು ಕಿ.ಮೀ.ಗಳಷ್ಟು ಹಿಂದಕ್ಕೆ ತಳ್ಳಿದ್ದ ಹೆಗ್ಗಳಿಕೆ ಅವರ ಅಧಿಕಾರಾವಧಿಯದಾಗಿತ್ತು. ತನ್ನ ಅಧಿಕಾರಾವಧಿಯುದ್ದಕ್ಕೂ ಚೀನಿ ಪಡೆಗಳಿಂದ ಯಾವುದೇ ಅತಿಕ್ರಮಣ ಪ್ರಯತ್ನಗಳ ವಿರುದ್ಧ ತನ್ನ ನಿಲುವಿಗೆ ಅವರು ಹೆಸರಾಗಿದ್ದರು. ಐದು ದಶಕಗಳಿಗೂ ಹೆಚ್ಚಿನ ತನ್ನ ರಾಜಕೀಯ ವೃತ್ತಿಜೀವನದಲ್ಲಿ ಮುಲಾಯಂ ಎರಡು ಸಲ ಪ್ರಧಾನಿ ಗಾದಿಯ ಸಮೀಪಕ್ಕೆ ತಲುಪಿದ್ದರು. 1996ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ 161 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್‌ಗೆ 141 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಾದರೂ ಸಾಕಷ್ಟು ಬಹುಮತವನ್ನು ಕ್ರೋಢೀಕರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಮತ್ತು 13 ದಿನಗಳಲ್ಲಿ ಸರಕಾರವು ಪತನಗೊಂಡಿತ್ತು.

ಸರಕಾರವನ್ನು ರಚಿಸಲು ಕಾಂಗ್ರೆಸ್ ಒಲವು ಹೊಂದಿರಲಿಲ್ಲ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರೂ ಸರಕಾರ ರಚನೆಗೆ ಮುಂದಾಗಲು ನಿರಾಕರಿಸಿದ್ದರು. ಪ್ರಧಾನಿ ಹುದ್ದೆಗೆ ಪ.ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರ ಹೆಸರು ಚರ್ಚೆಯಾಗಿತ್ತಾದರೂ ಸಂಯುಕ್ತ ರಂಗದ ಪಾಲುದಾರ ಪಕ್ಷಗಳಲ್ಲಿ ಸಹಮತ ಮೂಡಿಬಂದಿರಲಿಲ್ಲ. ಆಗ ಹಿರಿಯ ಸಿಪಿಎಂ ನಾಯಕ ಹರಕಿಶನ ಸಿಂಗ್ ಸುರ್ಜಿತ್ ಅವರು ಪ್ರಧಾನಿ ಹುದ್ದೆಗೆ ಮುಲಾಯಂ ಹೆಸರನ್ನು ಪ್ರಸ್ತಾಪಿಸಿದ್ದರು ಮತ್ತು ಅವರ ಉಮೇದುವಾರಿಕೆಗೆ ಹೆಚ್ಚುಕಡಿಮೆ ಒಮ್ಮತವೂ ವ್ಯಕ್ತವಾಗಿತ್ತು. ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಮುಂದಿನ ಪ್ರಧಾನಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದರು, ಆದರೆ ಲಾಲು ಪ್ರಸಾದ್ ಯಾದವ್ ಮತ್ತು ಶರದ್ ಯಾದವ್ ಅವರ ತೀವ್ರ ವಿರೋಧದಿಂದಾಗಿ ಮುಲಾಯಂ ಅವಕಾಶವನ್ನು ಕಳೆದುಕೊಂಡಿದ್ದರು.

1998ರಲ್ಲಿಯೂ ಇಂತಹುದೇ ಸಂದರ್ಭ ರೂಪುಗೊಂಡಿತ್ತು, ಆದರೆ ಯಾದವದ್ವಯರ ಬೆಂಬಲವಿಲ್ಲದ್ದರಿಂದ ಮುಲಾಯಂ ಎರಡನೇ ಸಲವೂ ಪ್ರಧಾನಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದರು.

ಕೃಪೆ: thequint.com

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ ನೀತಿಯಿಂದ ಪಕ್ಷಕ್ಕೆ ಪ್ರಯೋಜನವಿಲ್ಲ: ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರ ಸಂದೇಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News