ಡಾಲರ್‌ನೆದುರು 82.34ರ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

Update: 2022-10-10 16:35 GMT

ಹೊಸದಿಲ್ಲಿ,ಅ.10: ಅಮೆರಿಕದ ಡಾಲರ್‌ನೆದುರು(American dollar) ತತ್ತರಿಸುತ್ತಿರುವ ರೂಪಾಯಿಯ(Rupee) ಸ್ಥಿತಿ ಅಯೋಮಯವಾಗಿದೆ. ಸೋಮವಾರ ತನ್ನ ಹೆಚ್ಚಿನ ಆರಂಭಿಕ ನಷ್ಟವನ್ನು ತುಂಬಿಕೊಂಡ ರೂಪಾಯಿಯು ಅಪಾಯದಿಂದ ದೂರವಿರುವ ಹೂಡಿಕೆದಾರರ ಮನೋಭಾವದಿಂದಾಗಿ ನಾಲ್ಕು ಪೈಸೆ ಕುಸಿದು 82.34ರಲ್ಲಿ (ತಾತ್ಕಾಲಿಕ) ಮುಕ್ತಾಯಗೊಳ್ಳುವ ಮೂಲಕ ಡಾಲರ್‌ನೆದುರು ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ದಾಖಲಿಸಿದೆ.

ಸೋಮವಾರ ಬೆಳಿಗ್ಗೆ ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ(Interbank Foreign Exchange Market) ಡಾಲರ್‌ನೆದುರು 82.68ರಲ್ಲಿ ಇನಿಂಗ್ಸ್ ಆರಂಭಿಸಿದ್ದ ರೂಪಾಯಿ ಇನ್ನಷ್ಟು ಕುಸಿದು ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 82.69ಕ್ಕೆ ತಲುಪಿತ್ತು.

ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ,ಆರ್‌ಬಿಐನ ಸಂಭಾವ್ಯ ಮಧ್ಯಪ್ರವೇಶ ಮತ್ತು ಕಾರ್ಪೊರೇಟ್ ಒಳಹರಿವಿನ ನಿರೀಕ್ಷೆಯಲ್ಲಿ ರೂಪಾಯಿ ಆರಂಭಿಕ ನಷ್ಟವನ್ನು ತುಂಬಿಕೊಂಡಿದ್ದು,ಕಚ್ಚಾತೈಲ ಬೆಲೆಗಳಲ್ಲಿ ಇಳಿಕೆಯೂ ದಿನದ ವಹಿವಾಟಿನಲ್ಲಿ ರೂಪಾಯಿಯನ್ನು ಬೆಂಬಲಿಸಿತ್ತು. ಅಂತಿಮವಾಗಿ ಡಾಲರ್‌ನೆದುರು ಹಿಂದಿನ ದಿನದ ಮುಕ್ತಾಯದಿಂದ ನಾಲ್ಕು ಪೈಸೆ ಕುಸಿದು 82.34ರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ದಿನದಾಟ ಮುಗಿಸಿದೆ.

ಶುಕ್ರವಾರ ಡಾಲರ್‌ನೆದುರು 13ಪೈಸೆ ಅಪಮೌಲ್ಯಗೊಂಡಿದ್ದ ರೂಪಾಯಿ 82.30ರಲ್ಲಿ ಮುಕ್ತಾಯಗೊಂಡಿತ್ತು.

ಆದಾಗ್ಯೂ ಬಿಗಿಯಾದ ದ್ರವ್ಯತೆ ಸ್ಥಿತಿಗಳು ಮತ್ತು ಹೂಡಿಕೆದಾರರರಲ್ಲಿ ಅಪಾಯ ವಿರೋಧಿ ಮನೋಭಾವದ ನಡುವೆ ರೂಪಾಯಿ ನಕಾರಾತ್ಮಕ ಸಿಕ್ಕಿನಲ್ಲಿ ಸಾಗುವ ಸಾಧ್ಯತೆಯಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟಿಸ್‌ನ ಸಂಶೋಧನಾ ವಿಶ್ಲೇಷಕ ದಿಲೀಪ ಪರಮಾರ್ ಅಭಿಪ್ರಾಯಿಸಿದರು.

ಇದನ್ನೂ ಓದಿ : ಗಣಿ ಉದ್ಯಮಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂ ಅನುಮತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News