×
Ad

ರಾಜಸ್ಥಾನದ ಗೆಲುವಿನಲ್ಲಿ ತನ್ನ ಪಾತ್ರವನ್ನು ಕಾಂಗ್ರೆಸ್ ನಾಯಕತ್ವಕ್ಕೆ ನೆನಪಿಸಿದ ಸಚಿನ್ ಪೈಲಟ್

Update: 2022-10-11 20:56 IST

ಹೊಸದಿಲ್ಲಿ,ಅ.11: ತಾನು ರಾಜ್ಯ ಘಟಕದ ಮುಖ್ಯಸ್ಥನಾಗಿದ್ದಾಗ ತನ್ನ ನಾಯಕತ್ವದಡಿ ವರ್ಷಗಳ ಕಾಲ ಶ್ರಮಿಸಿದ್ದ ಕಾರ್ಯಕರ್ತರ ಬಲದಿಂದಾಗಿ 2018ರಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು ಎಂದು ಪಕ್ಷದ ಹಿರಿಯ ನಾಯಕ ಸಚಿನ್ ಪೈಲಟ್(Sachin is a pilot) ಹೇಳಿದ್ದಾರೆ. ತನ್ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಗೆ ತನ್ನ ಹಕ್ಕನ್ನು ಅವರು ಮರು ಪ್ರತಿಪಾದಿಸಿರುವಂತಿದೆ.

2020,ಜುಲೈನಲ್ಲಿ ಗೆಹ್ಲೋಟ್ ಜೊತೆ ತನ್ನ ಬಿಕ್ಕಟ್ಟನ್ನು ಬಗೆಹರಿಸಲು ಪಕ್ಷದ ನಾಯಕತ್ವವು ಕರೆದಿದ್ದ ಸಭೆಯನ್ನು ಪೈಲಟ್ ತಪ್ಪಿಸಿಕೊಂಡ ಬಳಿಕ ಅವರನ್ನು ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹುದ್ದೆಗಳಿಂದ ಕಿತ್ತು ಹಾಕಲಾಗಿತ್ತು.

ಸೋಮವಾರ ಕೋಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೈಲಟ್,ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ‘ನಾನು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನಾನು ಮತ್ತು ಕಾರ್ಯಕರ್ತರು ತುಂಬ ಕಷ್ಟಪಟ್ಟಿದ್ದೆವು. ಹದೋಟಿ ಪ್ರದೇಶದಲ್ಲಿ ರೈತರು ಮತ್ತು ಬಡವರಿಗಾಗಿ ನಾವು ಹೋರಾಡಿದ್ದೆವು. ನಮ್ಮ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಾರ್ವಜನಿಕರು, ರೈತರು,ಯುವಜನರ ನಿರೀಕ್ಷೆಗೆ ತಕ್ಕಂತಿರಬೇಕಾದ ಸಾಮೂಹಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ನಾವು ಒಂದಾಗಿ ಕೆಲಸ ಮಾಡುತ್ತಿದ್ದೇವೆ. 2023ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರದ ರಚನೆ ನಮ್ಮೆಲ್ಲರ ಗುರಿಯಾಗಿದೆ’ ಎಂದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹುದ್ದೆಯಲ್ಲಿ ಮುಂದುವರಿಯುವ ಕುರಿತು ಅನಿಶ್ಚಿತತೆಯ ನಡುವೆಯೇ ಪೈಲಟ್ ಅವರ ಈ ಸಂದೇಶ ಹೊರಬಿದ್ದಿದೆ. ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಪೈಲಟ್‌ರನ್ನು ಪ್ರತಿಷ್ಠಾಪಿಸುವ ಕಾಂಗ್ರೆಸ್‌ನ ಉದ್ದೇಶಿತ ಕ್ರಮದ ವಿರುದ್ಧ ಗೆಹ್ಲೋಟ್ ನಿಷ್ಠರು ಬಂಡಾಯವೆದ್ದ ಬಳಿಕ ತನ್ನ ಮುಂದಿನ ಕ್ರಮದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಳ್ಳುತ್ತಿದೆ. ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಝಲ್ರಾಪಟನ್ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಕೋಟಾಕ್ಕೆ ಪೈಲಟ್ ಭೇಟಿಯು ಸಂಕೇತಗಳು ಮತ್ತು ಸಂದೇಶಗಳಿಂದ ತುಂಬಿತ್ತು.

ಕೋಟಾ ಗೆಹ್ಲೋಟ್ ಬಗ್ಗೆ ಕಟ್ಟರ್ ನಿಷ್ಠೆಯನ್ನು ಹೊಂದಿರುವ ರಾಜಸ್ಥಾನದ ಸಂಪುಟ ಸಚಿವ ಶಾಂತಿ ಧಾರಿವಾಲ್ ಅವರ ತವರು ಕ್ಷೇತ್ರವಾಗಿದೆ. ಮುಂದಿನ ಮುಖ್ಯಮಂತ್ರಿಯ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅಧಿಕಾರ ನೀಡಲಿದ್ದ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾಗಿದ್ದ ಕಾಂಗ್ರೆಸ್ ಶಾಸಕರು ಇದೇ ಧಾರಿವಾಲ್‌ರ ನಿವಾಸದಲ್ಲಿ ಸಭೆ ಸೇರಿ ತಮ್ಮ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News