ಸೌರವ್ ಗಂಗುಲಿ ಬಿಜೆಪಿಗೆ ಸೇರದ್ದಕ್ಕೆ ಬಿಸಿಸಿಐ ಅಧ್ಯಕ್ಷರನ್ನಾಗಿ ಮುಂದುವರಿಸಿಲ್ಲ: ಟಿಎಂಸಿ ಆರೋಪ
ಕೋಲ್ಕತ್ತಾ: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ Sourav Ganguly ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗದ ಕಾರಣಕ್ಕೆ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಮುಂದುವರಿಸದೆ ಅವಮಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಪಶ್ಚಿಮ ಬಂಗಾಳದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಗಂಗುಲಿ ಅವರು ಪಕ್ಷಕ್ಕೆ ಸೇರುತ್ತಾರೆ ಎಂಬ ಸಂದೇಶವನ್ನು ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಜನರಲ್ಲಿ ಹರಡಲು ಪ್ರಯತ್ನಿಸಿತ್ತು ಎಂದು ತೃಣಮೂಲ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಎರಡನೇ ಅವಧಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿ ಮುಂದುವರಿಯಬಹುದು. ಆದರೆ ಗಂಗುಲಿ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಲು ಏಕೆ ಸಾಧ್ಯವಿಲ್ಲ. ಇದು "ರಾಜಕೀಯ ಸೇಡಿ"ಗೊಂದು ಉದಾಹರಣೆಯಾಗಿದೆ ಎಂದು ಟಿಎಂಸಿ ಹೇಳಿದೆ.
ಗಂಗುಲಿ ಅವರನ್ನು ಪಕ್ಷವು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಎಂದಿಗೂ ಪ್ರಯತ್ನಿಸಿಲ್ಲ ಆರೋಪಗಳು ಆಧಾರರಹಿತ ಎಂದು ಬಿಜೆಪಿ ಹೇಳಿದೆ.
1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಮಂಗಳವಾರ BCCI ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬಿಸಿಸಿಐ ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಅಕ್ಟೋಬರ್ 18 ರಂದು ಮುಂಬೈನಲ್ಲಿ ನಡೆಸಲಿದ್ದು, ಈ ವೇಳೆ ಬಿನ್ನಿ ಅವಿರೋಧವಾಗಿ ಉನ್ನತ ಹುದ್ದೆ ಪಡೆಯುವ ಸಾಧ್ಯತೆಯಿದೆ.
ನಾವು ಈ ವಿಷಯದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸುವುದಿಲ್ಲ, ಆದರೆ ಚುನಾವಣೆಯ ಸಮಯದಲ್ಲಿ ಹಾಗೂ ನಂತರ ಬಿಜೆಪಿಯು ಇಂತಹ ಪ್ರಚಾರವನ್ನು ಮಾಡಿದ್ದರಿಂದ, ಗಂಗುಲಿ ಅವರು ಬಿಸಿಸಿಐ ಮುಖ್ಯಸ್ಥರಾಗಿ ಎರಡನೇ ಬಾರಿಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದು ಖಂಡಿತವಾಗಿಯೂ ಬಿಜೆಪಿಯ ಜವಾಬ್ದಾರಿಯಾಗಿದೆ. ಸೌರವ್ ಅವರನ್ನು ಅವಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತೃಣಮೂಲ ವಕ್ತಾರರು ಹೇಳಿದ್ದಾರೆ.
"ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಈ ವರ್ಷದ ಮೇ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನ ಮನೆಗೆ ಊಟಕ್ಕೆ ಹೋಗಿದ್ದರು. ಸೌರವ್ ಅವರು ಪರಿಸ್ಥಿತಿಯನ್ನು ವಿವರಿಸಲು ಉತ್ತಮ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ’’ ಎಂದು ತೃಣಮೂಲ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿದರು.