×
Ad

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ 50 ಬೆಡ್ ಹೆಚ್ಚಳಕ್ಕೆ ಕ್ರಮ: ಆರೋಗ್ಯ ಸಚಿವ ಡಾ. ಸುಧಾಕರ್

Update: 2022-10-12 16:27 IST

ಭಟ್ಕಳ: ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು 50 ಬೆಡ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ ಹೇಳಿದ್ದಾರೆ.

ಅವರು ಮಂಗಳವಾರ ರಾತ್ರಿ ಭಟ್ಕಳ ಸರಕಾರಿ ಆಸ್ಪತ್ರೆಯ ಪರಿಶೀಲನೆ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಭಟ್ಕಳ ಸರಕಾರಿ ಆಸ್ಪತ್ರೆ ಕಳೆದ 2-3 ವರ್ಷಗಳ ಅವಧಿಯಲ್ಲಿ ಬಹಳಷ್ಟು ಸುಧಾರಣೆಯನ್ನು ಕಂಡಿದ್ದು, ಇಲ್ಲಿನ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ನೇತೃತ್ವದ ವೈದ್ಯರ ತಂಡವೇ ಇದಕ್ಕೆ ಕಾರಣವಾಗಿದೆ. ಮುಂದಿನ ಆಯವ್ಯಯದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ 50 ಹೆಚ್ಚುವರಿ ಬೆಡ್, ಸ್ಕ್ಯಾನಿಂಗ್ ಯಂತ್ರ ನೀಡಲು ಅನುದಾನವನ್ನು ಒದಗಿಸಲಾಗುವುದು. ಅಲ್ಲದೇ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ದೊಡ್ಡ ಸಂಖ್ಯೆಯಲ್ಲಿ ಇಲ್ಲದೇ ಹೋದರೂ ವಿಶೇಷ ಪ್ರಕರಣ ಎಂದು ಪರಿಗಣಿಸಿ ಭಟ್ಕಳಕ್ಕೆ ತಾಯಿ, ಮಗು ಆಸ್ಪತ್ರೆಯನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಿಪಿಎಲ್‌ ಕಾರ್ಡನವರಿಗೆ ಉಚಿತ ಸೇವೆ

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್‌ ಕಾರ್ಡದಾರರಿಗೆ ಉಚಿತವಾಗಿ ಪ್ರಯೋಗಾಲಯದ ಸೇವೆಯನ್ನು ನೀಡುವಂತೆ ಆರೋಗ್ಯ ಸಚಿವ ಕೆ.ಸುಧಾಕರ ಭಟ್ಕಳ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ಅಳವಡಿಸಲಾದ ಪ್ರಯೋಗಾಲಯದ ಖರ್ಚುವೆಚ್ಚಗಳ ಪಟ್ಟಿಯನ್ನು ಗಮನಿಸಿದ ಸಚಿವರು, ಬಡವರಿಗೆ ಅದರಿಂದ ಮುಕ್ತಿ ದೊರೆಯಬೇಕು. ಎಲ್ಲ ಸೇವೆಯನ್ನು ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಂತರ ಸಚಿವ ರಿಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್‌ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಆರೋಗ್ಯ ಇಲಾಖೆಯು ಕಾರ್ಯದರ್ಶಿ ಡಿ.ರಂದೀಪ್‌, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ, ಜಿಲ್ಲಾ ವೈದ್ಯಾಧಿಕಾರಿ ಶರದ್ ನಾಯಕ್, ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News