ದಿಲ್ಲಿ ಗಲಭೆಗಳ ಸಂದರ್ಭ ಸುದ್ದಿಯಾಗಿದ್ದ ನ್ಯಾಯಾಧೀಶರ ವರ್ಗಾವಣೆಗೆ ಕೇಂದ್ರದ ಒಪ್ಪಿಗೆಯಿನ್ನೂ ಸಿಕ್ಕಿಲ್ಲ !

Update: 2022-10-12 17:58 GMT

ಹೊಸದಿಲ್ಲಿ,ಅ.12: ಮದ್ರಾಸ್ ಉಚ್ಚ ನ್ಯಾಯಾಲಯದ (Madras High Court) ಮುಖ್ಯ ನ್ಯಾಯಾಧೀಶರ ಹುದ್ದೆಗೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿರುವ ನ್ಯಾ.ಎಸ್.ಮುರಳೀಧರ (Ny.S.Muralidhara) ಅವರ ಹೆಸರಿಗೆ ಕೇಂದ್ರವು ಇನ್ನೂ ಒಪ್ಪಿಗೆ ನೀಡಿಲ್ಲ. ಸೆ.28ರಂದು ಕೊಲಿಜಿಯಂ ನಿರ್ಣಯವೊಂದರ ಮೂಲಕ ಶಿಫಾರಸು ಮಾಡಿದ್ದ ಇನ್ನೋರ್ವ ನ್ಯಾಯಾಧೀಶರ ವರ್ಗಾವಣೆಗೆ ಸರಕಾರವು ಬುಧವಾರ ಅಸ್ತು ಎಂದಿದೆ.

ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪಂಕಜ್ ಮಿತ್ತಲ್  (Chief Justice Pankaj Mittal) ಅವರು ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ನ್ಯಾ. ಮುರಳೀಧರ ಅವರ ವರ್ಗಾವಣೆಯ ಕುರಿತು ಸರಕಾರವು ತುಟಿಪಿಟಕ್ಕೆಂದಿಲ್ಲ.

‌ಈ ಹಿಂದೆ ದಿಲ್ಲಿ ಉಚ್ಚ ನ್ಯಾಯಾಲಯದಿಂದ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ನ್ಯಾ. ಮುರಳೀಧರ ಅವರ ವರ್ಗಾವಣೆಯು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು. ದಿಲ್ಲಿ ವಕೀಲರ ಸಂಘದ ತೀವ್ರ ಪ್ರತಿಭಟನೆಯ ನಡುವೆಯೇ ಮಧ್ಯರಾತ್ರಿ ವರ್ಗಾವಣೆಯ ಆದೇಶ ಹೊರಬಿದ್ದಿತ್ತು.

2020,ಫೆಬ್ರವರಿಯಲ್ಲಿ ದಿಲ್ಲಿ ಗಲಭೆಗಳ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್,‌ ಪರ್ವೇಶ್ ವರ್ಮಾ,ಅಭಯ ವರ್ಮಾ ಮತ್ತು ಕಪಿಲ್ ಮಿಶ್ರಾ ಅವರ ಪ್ರಚೋದನಕಾರಿ ಭಾಷಣಗಳ ಕುರಿತು ಪೊಲೀಸ್ ಕ್ರಮಕ್ಕೆ ಆದೇಶಿಸಿದ ಮರುದಿನವೇ ನ್ಯಾ. ಮುರಳೀಧರ ಅವರನ್ನು ವರ್ಗಾಯಿಸಲಾಗಿತ್ತು.

‌‘ಈ ದೇಶದಲ್ಲಿ 1984ರಂತಹ ಇನ್ನೊಂದು ಘಟನೆ ಸಂಭವಿಸಲು ನಾವು ಅವಕಾಶ ನೀಡುವುದಿಲ್ಲ ’ ಎಂದು ನ್ಯಾ. ಮುರಳೀಧರ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು.

ನ್ಯಾ. ಮುರಳೀಧರ ವರ್ಗಾವಣೆಯನ್ನು ಖಂಡಿಸಿ ದಿಲ್ಲಿ ಉಚ್ಚ ನ್ಯಾಯಾಲಯದ ವಕೀಲರು ಒಂದು ದಿನ ಕಲಾಪಗಳಿಂದ ದೂರವಿದ್ದರು. ಈ ಕುರಿತು ಅಂತರರಾಷ್ಟ್ರೀಯ ವಕೀಲರ ಗುಂಪೊಂದು ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರವನ್ನು ಬರೆದಿತ್ತು.

ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಫೆ.12ರಂದು ಶಿಫಾರಸು ಮಾಡಿದ್ದ ನ್ಯಾಯಾಧೀಶರ ವರ್ಗಾವಣೆಯು ಮಾಮೂಲಿಯಾಗಿದೆ ಮತ್ತು ವಾಡಿಕೆಯಂತೆ ಅವರ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದು ಸರಕಾರವು ತಿಳಿಸಿತ್ತು. ನ್ಯಾ. ಮುರಳೀಧರ ಅವರು ಭೋಪಾಲ ಅನಿಲ ದುರಂತದ ಸಂತ್ರಸ್ತರು ಮತ್ತು ನರ್ಮದಾ ಅಣೆಕಟ್ಟಿನಿಂದ ನಿರಾಶ್ರಿತರಾದವರ ಪರ ಕಾನೂನು ಸಮರ ನಡೆಸುವ ಮೂಲಕ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು.

1984ರ ಸಿಖ್ ವಿರೋಧಿ ದಂಗೆಗಳಿಗಾಗಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ,1987ರಲ್ಲಿ 42 ಮುಸ್ಲಿಮರನ್ನು ಕೊಲ್ಲಲಾಗಿದ್ದ ಹಾಶಿಮ್‌ಪುರ ನರಮೇಧ ಪ್ರಕರಣದಲ್ಲಿ ಪೊಲೀಸರನ್ನು ದೋಷಿಗಳೆಂದು ಘೋಷಿಸಿದ್ದು ನ್ಯಾ. ಮುರಳೀಧರ ಅವರ ಮಹತ್ವದ ತೀರ್ಪುಗಳಲ್ಲಿ ಸೇರಿವೆ. ಅವರು 2009ರಲ್ಲಿ ಸಲಿಂಗ ಕಾಮವನ್ನು ಮೊದಲು ಕಾನೂನುಬದ್ಧಗೊಳಿಸಿದ್ದ ಉಚ್ಚ ನ್ಯಾಯಾಲಯದ ಪೀಠದ ಭಾಗವೂ ಆಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News