ರಸಗೊಬ್ಬರಗಳ ಜಾಗತಿಕ ಬೆಲೆ ಏರಿಕೆಯ ನಡುವೆಯೂ ಭಾರತವು ರೈತರನ್ನು ರಕ್ಷಿಸಿದೆ: ನಿರ್ಮಲಾ ಸೀತಾರಾಮನ್

Update: 2022-10-12 17:18 GMT
NIRMALA SITARAMAN(PHOTO:PTI)

ವಾಶಿಂಗ್ಟನ್,ಅ.12: ರಸಗೊಬ್ಬರಗಳ ಜಾಗತಿಕ ದರದಲ್ಲಿ ಏರಿಕೆಯ ಹೊರತಾಗಿಯೂ ಭಾರತವು ತನ್ನ ರೈತರಿಗೆ ಹೆಚ್ಚುವರಿ ಸಬ್ಸಿಡಿಗಳನ್ನು ಒದಗಿಸುವ ಮೂಲಕ ಅವರಿಗೆ ಹೊರೆಯಾಗದಂತೆ ನೋಡಿಕೊಳ್ಳು ಮೂಲಕ ಅವರ ರಕ್ಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.

ವಾಶಿಂಗ್ಟನ್‌ನಲ್ಲಿ ಮಂಗಳವಾರ ಬ್ರೂಕಿಂಗ್ ಇನ್‌ಸ್ಟಿಟ್ಯೂಟ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ರಸಗೊಬ್ಬರ ಹಾಗೂ ಇಂಧನ ಬೆಲೆ ಏರಿಕೆ ಮಾತ್ರವಲ್ಲದೆ ಅವುಗಳನ್ನು ರೈತರಿಗೆ ಸಮರ್ಪಕವಾಗಿ ದೊರೆಯುವಂತೆ ಮಾಡುವುದು ಕೂಡಾ ಭಾರತ ಸರಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು ಎಂದವರು ಹೇಳಿದರು.

ರಸಗೊಬ್ಬರಗಳ ಲಭ್ಯತೆಯ ಕೊರತೆ ಹಾಗೂ ಅವುಗಳ ಬೆಲೆಯೇರಿಕೆಯ ದರಗಳು ಏರಿಕೆಯಾದ ಹಿನ್ನೆಲೆಯಲ್ಲಿ ಜಗತ್ತಿನ ಕೆಲವು ಭಾಗಗಳು ತೀವ್ರವಾದ ಆಹಾರದ ಅಭದ್ರತೆಯನ್ನು ಎದುರಿಸುತ್ತಿದೆಯೆಂದು ನಿರ್ಮಲಾ ಅವರು ಖ್ಯಾತ ಅರ್ಥಶಾಸ್ತ್ರಜ್ಞ ಈಶ್ವರ ಪ್ರಸಾದ್ ಅವರ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಕಳೆದ ವರ್ಷ ರಸಗೊಬ್ಬರಗಳ ಆಮದಿಗೆ ನಾವು 10 ಪಟ್ಟು ಅಧಿಕ ದರವನ್ನು ನೀಡಬೇಕಾಗಿತ್ತು. ಭಾರತೀಯ ರೈತರು ದೊಡ್ಡ ಮಟ್ಟದ ಹಿಡುವಳಿದಾರರಲ್ಲದ ಕಾರಣ ಅವರಿಗೆ ಯೋಗ್ಯ ದರದಲ್ಲಿ ರಸಗೊಬ್ಬರಗಳ ಅವಶ್ಯಕತೆಯಿದೆ. ಹೀಗಾಗಿ ರೈತರಲ್ಲಿ ನಾವು ಆಮದು ಮಾಡಿದ ದರದಲ್ಲೇ ನಿಮಗೆ ರಸಗೊಬ್ಬರಗಳನ್ನು ಪೂರೈಕೆ ಮಾಡುತ್ತೇವೆ, ಅದರ ಹೊರೆಯನ್ನು ನೀವೇ ಹೊರಬೇಕು ಎಂದು ಹೇಳುವಂತಿಲ್ಲವೆಂದು ಸಚಿವೆ ಹೇಳಿದರು.

ಭಾರತೀಯ ರೈತರಿಗಾಗಿ ಸರಕಾರವು ರಸಗೊಬ್ಬರಗಳನ್ನು ಯೋಗ್ಯ ದರದಲ್ಲಿ ವಿತರಿಸಲು ತನ್ನ ಬೊಕ್ಕಸದಿಂದ ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಯಿತು ಎಂದು ಆಕೆ ಹೇಳಿದರು.

ಅಂತಾರಾಷ್ಟ್ರೀಯ ದರಗಳಲ್ಲಿ ಏರಿಕೆಯಾಗಿರುವ ಹೊರತಾಗಿಯೂ ಭಾರತೀಯ ರೈತನು 2018,201,2020ರಲ್ಲಿ ಪಾವತಿಸಿಷ್ಟೇ ಹಣವನ್ನು ರಸಗೊಬ್ಬರಗಳ ಖರೀದಿಗೆ ಈಗಲೂ ಪಾವತಿಸುತ್ತಾನೆ.

 2020-21ರ ಹಣಕಾಸು ವರ್ಷದಲ್ಲಿ 81,125 ಕೋಟಿ ರೂ. ನಷ್ಟಿದ್ದ ಬಜೆಟ್ ಸಬ್ಸಿಡಿಯನ್ನು ಹಾಲಿ ವಿತ್ತ ವರ್ಷದಲ್ಲಿ 2,15,222 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಕೇರ್ ಏಡ್ಜ್, ರಸಗೊಬ್ಬರ ಇಲಾಖೆಯ ಹೇಳಿಕೆಗಳನ್ನು ಉಲ್ಲೇಖಿಸಿದೆ.

ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 16ರವರೆಗೆ ಅಮೆರಿಕದ ಅಧಿಕೃತ ಭೇಟಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವಬ್ಯಾಂಕ್‌ನ ವಾರ್ಷಿಕ ಸಮಾವೇಶ, ಜಿ20 ವಿತ್ತ ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ (ಎಫ್‌ಎಂಸಿಬಿಜಿ) ಸಮ್ಮೇಳನದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ.

ವಿತ್ತ ಸಚಿವೆ ಅವರು ತನ್ನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಜಪಾನ್, ದಕ್ಷಿಣ ಕೊರಿಯ, ಸೌದಿ ಆರೇಬಿಯ, ಆಸ್ಟ್ರೇಲಿಯ, ಭೂತಾನ್, ನ್ಯೂಝಿಲ್ಯಾಂಡ್,ಈಜಿಪ್ಟ್, ಜರ್ಮನಿ, ಮಾರಿಷಸ್, ಯುಎಇ. ಇರಾನ್ ಹಾಗೂ ನೆದರ್‌ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳ ಪ್ರತಿನಿಧಿಗಳ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News