ಯುಎಇ ಉದ್ಯೋಗ ಒಪ್ಪಂದ ನವೀಕರಣದಿಂದ ಭಾರತೀಯರಿಗೆ ಅನುಕೂಲ: ವರದಿ

Update: 2022-10-12 18:40 GMT
PHOTO: PTI

ಅಬುದಾಬಿ, ಅ.12: ಯುಎಇಯ ಮಾನವ ಸಂಪನ್ಮೂಲ ಇಲಾಖೆಯು ಇತ್ತೀಚೆಗೆ ಹೆಚ್ಚಿನ ನಮ್ಯತೆ(ಫ್ಲೆಕ್ಸಿಬಿಲಿಟಿ) ಒದಗಿಸುವ ಉದ್ದೇಶದಿಂದ ಉದ್ಯೋಗ ಸಂಬಂಧಗಳ ಮೇಲಿನ ತನ್ನ ಕಾಯಿದೆಯನ್ನು ಆಧುನೀಕರಿಸಿದ್ದು ಇದರಿಂದ ಬಾರತೀಯರಿಗೆ ಅನುಕೂಲವಾಗಬಹುದು ಎಂದು ಮೂಲಗಳು ಹೇಳಿವೆ.

ಉದ್ಯೋಗ ಒಪ್ಪಂದಗಳ ಅವಧಿಯ ಮೇಲಿನ ಮಿತಿಯನ್ನು ಯುಎಇ ತೆಗೆದುಹಾಕಿದ್ದು ಈ ಕ್ರಮವು ದೇಶವನ್ನು ‘ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹೆಚ್ಚು ಸಮತೋಲಿತ’ ಪ್ರದೇಶವಾಗಿ ರೂಪಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಹೊಸ ಕಾನೂನಿನ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಒಪ್ಪಂದಗಳನ್ನು ಸ್ಥಿರ ಅವಧಿಯ ಒಪ್ಪಂದಗಳಿಗೆ ಬದಲಾಯಿಸಲಾಗುತ್ತದೆ. ಈ ಹಿಂದೆ ಕೆಲಸಗಾರರನ್ನು ಮೂರು ವರ್ಷದ ಸ್ಥಿರ ಅವಧಿಯ ಉದ್ಯೋಗ ಒಪ್ಪಂದದ ಅನ್ವಯ ನೇಮಿಸಿಕೊಳ್ಳಲಾಗುತ್ತಿತ್ತು. ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ, ಎಲ್ಲಾ ಉದ್ಯೋಗ ಒಪ್ಪಂದಗಳು ನಿರ್ಧಿಷ್ಟ ಅವಧಿಯನ್ನು ಒಳಗೊಂಡಿರಬೇಕು, ಆದರೆ ಅವಧಿಗೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಆದ್ದರಿಂದ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು.

  ಈ ಹಿಂದೆ ಉದ್ಯೋಗ ಒಪ್ಪಂದಗಳನ್ನು ಉದ್ಯೋಗಿಯ ವೀಸಾ ಸ್ಥಿತಿ(ಸ್ಟೇಟಸ್)ನೊಂದಿಗೆ ಹೊಂದಿಸಲಾಗುತ್ತಿತ್ತು. ಇದರಿಂದಾಗಿ ಒಪ್ಪಂದಗಳು ಈ ಹಿಂದಿನ ನಿವಾಸ ವೀಸಾದ ವಾಯಿದೆಯಾದ 2 ಅಥವಾ 3 ವರ್ಷಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈಗಿನ ನವೀಕರಣದಿಂದಾಗಿ, ಉದ್ಯೋಗ ಒಪ್ಪಂದವು ಅರ್ಜಿದಾರನ ವೀಸಾ ಸ್ಥಿತಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರಲು ಸಾಧ್ಯವಾಗಲಿದೆ. ಆದ್ದರಿಂದ ಈ ಮಾರ್ಪಾಡು ಭಾರತೀಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಬಹುದು ಎಂದು ವರದಿ ಹೇಳಿದೆ.

ಹೊಸ ನಿಯಮದ ಪ್ರಕಾರ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಹೊಂದಿಕೊಳ್ಳುವ(ಫ್ಲೆಕ್ಸಿಬಲ್), ತಾತ್ಕಾಲಿಕ ಅಥವಾ ಅರೆಕಾಲಿಕ ಒಪ್ಪಂದಗಳನ್ನು ಪಡೆಯಲು ಮತ್ತು ಒಂದಕ್ಕಿಂತ ಹೆಚ್ಚು ಉದ್ಯೋಗ ಮಾದರಿಗಳನ್ನು ಸಂಯೋಜಿಸಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News