ಮತದಾರರ ನೋಂದಣಿ ಆದೇಶ ಹಿಂಪಡೆದ ಜಮ್ಮು ಆಡಳಿತ

Update: 2022-10-13 01:54 GMT
ಫೈಲ್‌ ಫೋಟೊ 

ಜಮ್ಮು/ ಶ್ರೀನಗರ: ವ್ಯಾಪಕ ಟೀಕೆಗೆ ಗುರಿಯಾಗಿದ್ದ ಮತದಾರರ ನೋಂದಣಿ ಆದೇಶವನ್ನು ಜಮ್ಮು ಆಡಳಿತ ಬುಧವಾರ ತಡರಾತ್ರಿ ವಾಪಾಸು ಪಡೆದಿದೆ ಎಂದು timesofindia.com ವರದಿ ಮಾಡಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅವ್ನಿ ಲವಾಸ ಹೊರಡಿಸಿದ್ದ ಮೂಲ ಆದೇಶದ ಪ್ರಕಾರ, "ಕೆಲ ಅರ್ಹ ಮತದಾರರಿಗೆ ನಿರ್ದಿಷ್ಟಪಡಿಸಿದ ಕೆಲ ದಾಖಲೆಗಳು ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ತೊಡಕು ಉಂಟಾಗಿದೆ. ಯಾವ ಅರ್ಹ ಮತದಾರರೂ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಖಾತರಿಪಡಿಸುವ ಸಲುವಾಗಿ, ಅಗತ್ಯ ಕ್ಷೇತ್ರ ಪರಿಶೀಲನೆ ಬಳಿಕ ವಾಸಸ್ಥಳ ಬಗೆಗಿನ ಪ್ರಮಾಣಪತ್ರಗಳನ್ನು ನೀಡಲು ತಹಸೀಲ್ದಾರರಿಗೆ ಅಧಿಕಾರ ನೀಡಲಾಗಿದೆ"

ಈ ಆದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಸಾಮ್ರಾಜ್ಯಶಾಹಿ ವಸಾಹತು ವಿಸ್ತರಣೆಯ ನಡೆ ಎಂದು ಪಿಡಿಪಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟೀಕಿಸಿದ್ದರು. ಜಮ್ಮು ಕಾಶ್ಮೀರದಲ್ಲಿ ಜನಸಂಖ್ಯೆ ಅನುಪಾತವನ್ನು ಬದಲಿಸುವುದು ಇದರ ಹಿಂದಿನ ಉದ್ದೇಶ ಎಂದು ಅವರು ಆಪಾದಿಸಿದ್ದಾರೆ.

ಮತಪೆಟ್ಟಿಗೆಗಳಲ್ಲಿ ಈ ಪಿತೂರಿಯನ್ನು ಸೋಲಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಕರೆ ನೀಡಿದ್ದಾರೆ. ಕೆಲ ವ್ಯಕ್ತಿಗಳು ಮತದಾರರ ಪಟ್ಟಿಗೆ ಸೇರುವ ಹಿನ್ನೆಲೆಯಲ್ಲಿ ಸಾಮಾಜಿಕ ಆತಂಕದ ಸ್ಥಿತಿ ಎದುರಾಗಬಹುದು ಎಂದು ಡೆಮಾಕ್ರಟಿಕ್ ಆಝಾದ್ ಪಾರ್ಟಿ ಅಧ್ಯಕ್ಷ ಗುಲಾಬ್ ನಬಿ ಅಝಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಬಿಜೆಪಿ, ಈ ಆದೇಶವನ್ನು ಸಮರ್ಥಿಸಿಕೊಂಡಿದೆ. ಜನಪ್ರತಿನಿಧಿ ಕಾಯ್ದೆಗೆ ಅನುಸಾರವಾಗಿಯೇ ಈ ಆದೇಶ ಇದೆ ಎಂದು ಹೇಳಿಕೊಂಡಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News