ಸದಾಶಯಗಳು ಮತ್ತು ಸಾರವಿಲ್ಲದ ಸಂಕೇತಗಳ ಸಮಸ್ಯೆಗಳು

Update: 2022-10-13 03:23 GMT

ಭಾಗ - 2

ಬದನವಾಳುವಿನ ಜಾತಿ ಕುಲುಮೆ- ಸವರ್ಣೀಯ ಕಾಂಗ್ರೆಸ್‌ನಿಂದ ಹಿಂದುತ್ವವಾದಿ ಬಿಜೆಪಿಯೆಡೆಗೆ

ಹಾಗೆಯೇ ಬದನವಾಳುವಿನ ಜಾತಿ ಸಂಘರ್ಷದ ಇತಿಹಾಸವನ್ನು ಮತ್ತು ಬದಲಾದ ಸಾಮಾಜಿಕ ಸಂದರ್ಭವನ್ನು ಅರ್ಥ ಮಾಡಿಕೊಂಡರೆ ರಾಹುಲ್ ಗಾಂಧಿ ಉದ್ಘಾಟಿಸಿದ ‘ಭಾರತ್ ಜೋಡೊ ರಸ್ತೆ’ ಮತ್ತು ಸಹಭೋಜನ ಕೂಡ ಹೆಚ್ಚೆಂದರೆ ಸದಾಶಯದ ಆದರೆ ಸತ್ವವಿಲ್ಲದ ಸಂಕೇತ ಮಾತ್ರವೇ ಆಗಿರುವುದು ಸ್ಪಷ್ಟವಾಗುತ್ತದೆ.

ಬದನವಾಳುವಿನಲ್ಲಿ ದಲಿತರು ಮತ್ತು ಲಿಂಗಾಯತರು ಹೆಚ್ಚು-ಕಡಿಮೆ ಸಮಪ್ರಮಾಣದಲ್ಲಿದ್ದಾರೆ. ಸಾಂಪ್ರದಾಯಿಕವಾಗಿ ಲಿಂಗಾಯತರು ಭೂ ಹಿಡುವಳಿದಾರರಾಗಿದ್ದರೆ, ದಲಿತರು ಅವರ ಹಾಗೂ ಅಕ್ಕಪಕ್ಕದ ಗ್ರಾಮಸ್ಥರ ಹೊಲಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದರು. ಆದರೆ ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳ ನಂತರದಲ್ಲಿ ದಲಿತರು ಹೆಚ್ಚೆಚ್ಚು ಶಿಕ್ಷಿತರಾಗಲಾರಂಭಿಸಿದರು. ಸರಕಾರವು ನೀಡಿದ ಮೀಸಲಾತಿ ಮತ್ತಿತರ ಯೋಜನೆಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಹಾಗೂ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳಲಾರಂಭಿಸಿದರು. ಕೇವಲ ೨೫ ಕಿ.ಮೀ. ದೂರದಲ್ಲಿದ್ದ ಮೈಸೂರು ಮಹಾನಗರವು ಹಳ್ಳಿಯಲ್ಲಿ ಮೇಲ್ಜಾತಿ ಅವಲಂಬನೆಯಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕೊಟ್ಟಿತ್ತು. ಇವೆಲ್ಲದರ ಪರಿಣಾಮವಾಗಿ ದಲಿತ ಸಮುದಾಯದಲ್ಲಿ ಲಿಂಗಾಯತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರರು, ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಸರಕಾರಿ ಉದ್ಯೋಗಸ್ಥರು ಹುಟ್ಟಿಕೊಂಡರು. ಅದೇ ಸಂದರ್ಭದಲ್ಲಿ ಪ್ರಬಲವಾದ ಮಾನವತಾವಾದಿ ಪ್ರಗತಿಪರ ಚಳವಳಿಯಾಗಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿಯ ಪ್ರಭಾವವೂ ಈ ನವ ಶಿಕ್ಷಿತ ದಲಿತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯನ್ನು ಸ್ವಾಭಿಮಾನವನ್ನು ಹುಟ್ಟುಹಾಕಿತ್ತು.

ಆದರೆ ಪ್ರಧಾನವಾಗಿ ಕೃಷಿಯನ್ನೇ ನೆಚ್ಚಿಕೊಂಡಿದ್ದ ಲಿಂಗಾಯತ ಸಮುದಾಯ ಈ ದಶಕಗಳಲ್ಲಿ ದಲಿತರಷ್ಟು ಮೇಲ್ಚಲನೆಯನ್ನು ಸಾಧಿಸಲಿಲ್ಲ. ಇದರಿಂದಾಗಿ ದಲಿತರ ಬಗ್ಗೆ ಲಿಂಗಾಯತರಲ್ಲಿ ಜಾತಿ ಅಸಹನೆಯು ನಿಧಾನವಾಗಿ ಮಡುಗಟ್ಟಲು ಪ್ರಾರಂಭಿಸಿತ್ತು. ಆದರೂ ಆ ಸಮಯದಲ್ಲಿ ಅಲ್ಲಿ ಆರೆಸ್ಸೆಸ್ ಕೂಡಾ ಕೆಲಸ ಮಾಡುತ್ತಿದ್ದುದರಿಂದ ೧೯೮೯ರಲ್ಲಿ ದಲಿತರು ಮತ್ತು ಲಿಂಗಾಯತರು ಇಬ್ಬರೂ ಕೂಡಿಯೇ ಅಯೋಧ್ಯೆಗೆ ಬದನವಾಳುವಿನಿಂದ ಇಟ್ಟಿಗೆಯನ್ನು ಕಳಿಸಿಕೊಟ್ಟಿದ್ದರು.

೧೯೯೩ರಲ್ಲಿ ಬಂಗಾರಪ್ಪನವರ ನೇತೃತ್ವದ ಕಾಂಗ್ರೆಸ್ ಸರಕಾರ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣಕಾಸು ಸಹಾಯ ಮಾಡುವ ‘ಆರಾಧನಾ’ ಯೋಜನೆಯನ್ನು ಘೋಷಿಸುವುದರೊಂದಿಗೆ ಆವರೆಗೆ ಸಾಮಾಜಿಕವಾಗಿ ಮಡುಗಟ್ಟುತ್ತಿದ್ದ ಮೇಲ್ಜಾತಿ ಅಸಹನೆಯು ಸ್ಫೋಟಗೊಳ್ಳಲು ದಾರಿಯನ್ನು ಒದಗಿಸಿತು. ಈ ಯೋಜನೆಯಡಿ ಬದನವಾಳು ಗ್ರಾಮದ ಸಿದ್ಧೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಸರಕಾರದ ಧನದೊಂದಿಗೆ ಗ್ರಾಮಸ್ಥರ ಕೊಡುಗೆಯನ್ನು ಸಂಗ್ರಹಿಸಲು ಮುಂದಾದ ಲಿಂಗಾಯತರೇ ಇದ್ದ ದೇವಸ್ಥಾನ ಸಮಿತಿ ದಲಿತರ ಕೊಡುಗೆಯನ್ನೂ ಕೇಳಿತು. ದಲಿತರು ೩೦,೦೦೦ರೂ.ಯಷ್ಟು ಧನಸಹಾಯ ಮಾಡಿದರೂ ತಮಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಬೇಕೆಂಬ ಶರತ್ತನ್ನು ಹಾಕಿದರು. ಸಮಿತಿಯು ಅದಕ್ಕೆ ಒಪ್ಪಿಕೊಂಡರೂ, ನವೀಕೃತ ದೇವಸ್ಥಾನವು ೧೯೯೩ರ ಜನವರಿ ೩೦ರಂದು ಉದ್ಘಾಟನೆಯಾಗುವಾಗ ದಲಿತರಿಗೆ ಆಹ್ವಾನ ನೀಡಲಿಲ್ಲ. ಇದರಿಂದ ಕುಪಿತಗೊಂಡ ದಲಿತರು ಸಮಾರಂಭದಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಿದರು. ಲಿಂಗಾಯತರು ಅದನ್ನು ಬಲವಾಗಿ ನಿರಾಕರಿಸಿದ್ದರಿಂದ ಘರ್ಷಣೆಯುಂಟಾಯಿತು. ದೇವಸ್ಥಾನಕ್ಕೆ ಬೀಗ ಹಾಕಲಾಯಿತು. ಆಗ ಸ್ಥಳೀಯ ಕಾಂಗ್ರೆಸ್ ಶಾಸಕರಾಗಿದ್ದ ಲಿಂಗಾಯತ ಸಮುದಾಯದ ‘ಬೆಂಕಿ’ ಮಹದೇವು ದಲಿತರ ವಿರುದ್ಧ ಲಿಂಗಾಯತರ ಪರವಾಗಿ ನಿಂತರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದಿಂದ ಮರುದಿನ ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶ ಸಿಕ್ಕರೂ, ಲಿಂಗಾಯತ ಸಮುದಾಯದ ಕೆಲವು ಜಾತಿಗ್ರಸ್ಥ ಮನಸ್ಸುಗಳು ದಲಿತರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದರು.

೧೯೯೩ರ ಮಾರ್ಚ್ ೨೫ರಂದು ಬದನವಾಳುವಿನ ದಲಿತರ ಯುವ ಕ್ರಿಕೆಟ್ ತಂಡ ಪಕ್ಕದ ಹಳ್ಳಿಯಲ್ಲಿ ಪಂದ್ಯ ಗೆದ್ದು ಹಿಂದಿರುಗುತ್ತಿರುವಾಗ ೬೦ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಗುಂಪು ಕತ್ತಿ-ಮಚ್ಚುಗಳಿಂದ ದಾಳಿ ಮಾಡಿ ಮೂವರನ್ನು ಬಲಿ ತೆಗೆದುಕೊಂಡಿತು. ಕೊಲೆಯಾದವರಲ್ಲಿ ದಾಳಿ ಮಾಡಿದ ಹಲವರಿಗೆ ವಿದ್ಯೆ ಕಲಿಸಿದ ಶಾಲೆಯ ದಲಿತ ಮುಖ್ಯೋಪಾಧ್ಯಾಯ ನಾರಾಯಣ ಸ್ವಾಮಿ ಮತ್ತು ಇಂಜಿನಿಯರಿಂಗ್ ಓದುತ್ತಿದ್ದ ಅವರ ಮಗ ಮಧುಕರ್ ಕೂಡ ಸೇರಿದ್ದರು.

ಇದರ ವಿರುದ್ಧ ಡಿಎಸ್ಸೆಸ್ ನೇತೃತ್ವದಲ್ಲಿ ನಂಜನಗೂಡು ಮತ್ತು ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗಳಾದವು. ಬೆಂಕಿ ಮಹದೇವು ಅವರನ್ನು ಬಂಧಿಸಬೇಕೆಂಬುದು ಒಂದು ಬೇಡಿಕೆಯಾಗಿತ್ತು. ಅದನ್ನು ಆಗ ಕಾಂಗ್ರೆಸ್ ಪಕ್ಷದಿಂದ ಎಂಪಿಯಾಗಿದ್ದ ದಲಿತ ನಾಯಕ ಶ್ರಿನಿವಾಸ್ ಪ್ರಸಾದ್ ಕೂಡ ಬೆಂಬಲಿಸಿದ್ದರು. ಆದರೆ ಮರುದಿನವೇ ಬೆಂಕಿ ಮಹದೇವು ಕೂಡ ಸಹಸ್ರಾರು ಲಿಂಗಾಯತರನ್ನು ಒಟ್ಟು ಸೇರಿಸಿ ಡಿಎಸ್ಸೆಸ್ ಅನ್ನು ನಿಷೇಧಿಸಬೇಕೆಂದು, ಅದು ‘‘ರಾಷ್ಟ್ರವಾದಿ ಆರೆಸ್ಸೆಸ್’’ಗಿಂತ ಅಪಾಯಕಾರಿ ಎಂದು ಘೋಷಿಸಿದರು. ಪ್ರಕರಣವನ್ನು ಸಿಬಿಐಗೆ ನೀಡಲಾಯಿತು. ಮುಂದಿನ ಎರಡು ವರ್ಷಗಳು ಚುನಾವಣಾ ವರ್ಷಗಳಾದ್ದರಿಂದ ಮೇಲ್ಜಾತಿ ಲಿಂಗಾಯತರ ಬೆಂಬಲವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಕೂಡ ಸಿದ್ಧವಿರದಿದ್ದರಿಂದ ತನಿಖೆಯಲ್ಲಿ ಹೆಚ್ಚು ಪ್ರಗತಿಯಾಗಲಿಲ್ಲ. ಇದರಿಂದ ಬೇಸತ್ತ ಕೆಲವು ದಲಿತ ಯುವಕರು ಮೇಲ್ಜಾತಿ ಲಿಂಗಾಯತರಿಗೆ ಪಾಠ ಕಲಿಸಬೇಕೆಂಬ ಆಕ್ರೋಶದಲ್ಲಿ ಆ ವಲಯದ ಲಿಂಗಾಯತರೇ ಹೆಚ್ಚಿದ್ದ ಗ್ರಾಮವೊಂದರ ಹಲವಾರು ಲಿಂಗಾಯತರ ಮನೆಗಳಿಗೆ ಬೆಂಕಿ ಹಚ್ಚಿದರು.

ತನಿಖೆ ಮುಂದುವರಿದು ೨೦೧೦ರಲ್ಲಿ ೨೩ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಯಿತು. ಮತ್ತೆ ೨೩ ಆರೋಪಿಗಳು ಖುಲಾಸೆಯಾದರು. ೧೯೯೩ರ ನಂತರದಲ್ಲಿ ಬದನವಾಳುವಿನಲ್ಲಿ ಮತ್ತೆ ಯಾವುದೇ ಜಾತಿ ಸಂಘರ್ಷ ನಡೆದಿಲ್ಲ. ಲಿಂಗಾಯತ ಹಾಗೂ ದಲಿತ ಹಟ್ಟಿಗಳನ್ನು ಕೂಡಿಸುತ್ತಿದ್ದ ಓಣಿಯ ಬಳಕೆ ಕಡಿಮೆಯಾಗಿತ್ತೇ ಹೊರತು ಬಳಕೆಯೇ ನಿಂತಿರಲಿಲ್ಲ. ಎರಡು ಜಾತಿಗಳು ಹೆದ್ದಾರಿಯನ್ನು ಸೇರಿಸುವ ಪ್ರತ್ಯೇಕ ರಸ್ತೆಗಳನ್ನು ಬಳಸುತ್ತಿದ್ದರು.

‘‘ಒಳಗೊಳ್ಳುವ ಹಿಂದುತ್ವ’’ -ಮತ್ತದೇ ಮನುವಾದದ ಕಾವಲುಗಾರಿಕೆ

೧೯೯೩ರ ಘಟನೆಗಳಿಗೆ ಮುಂಚೆ ಈ ವಲಯದಲ್ಲಿ ಹೇಳಹೆಸರಿಲ್ಲವಾಗಿದ್ದ ಬಿಜೆಪಿ ಈಗ ದೊಡ್ಡದಾಗಿ ಬೆಳೆದಿದೆ. ಬದನವಾಳು ಗ್ರಾಮವು ನಂಜನಗೂಡು ಶಾಸನಸಭಾ ಕ್ಷೇತ್ರಕ್ಕೆ ಸೇರುತ್ತದೆ. ೨೦೦೮ರ ನಂತರ ಇದು ಮೀಸಲು ಕ್ಷೇತ್ರವಾಗಿದೆ. ೧೯೯೪ರ ಚುನಾವಣೆಯವರೆಗೆ ನಂಜನಗೂಡು ಕ್ಷೇತ್ರದಲ್ಲಿ ಕೇವಲ ೪-೫ ಸಾವಿರ ವೋಟು ಪಡೆಯುತ್ತಿದ್ದ ಬಿಜೆಪಿ ೨೦೧೮ರ ಚುನಾವಣೆಯಲ್ಲಿ ೭೫,೦೦೦ ವೋಟುಗಳೊಂದಿಗೆ ಭರ್ಜರಿ ಜಯವನ್ನು ಸಾಧಿಸಿದೆ. ಇಲ್ಲಿನ ದಲಿತರು ಗೌರವಾಭಿಮಾನಗಳಿಂದ ಕಾಣುತ್ತಿದ್ದ ಮಾಜಿ ಎಂಪಿ ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿಯನ್ನು ಸೇರಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಹರ್ಷವರ್ಧನ ಅವರ ಸಂಬಂಧಿಯೇ. ಕಳೆದ ಚುನಾವಣೆಯಲ್ಲಿ ಬದನವಾಳುವಿನ ಬಹುಪಾಲು ಲಿಂಗಾಯತರು ಮಾತ್ರವಲ್ಲದೆ ಶ್ರೀನಿವಾಸ್ ಪ್ರಸಾದ್ ಕಾರಣದಿಂದಾಗಿ ಅರ್ಧಕ್ಕಿಂತಲೂ ಹೆಚ್ಚು ದಲಿತರು ಬಿಜೆಪಿಗೆ ವೋಟು ಹಾಕಿದ್ದಾರೆ.

ಇದಲ್ಲದೆ ಈ ವಲಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಮನುವಾದಿ ರಾಜಕೀಯದ ವಿರುದ್ಧ ಬಹುಜನ ಸಮಾಜ ಪಕ್ಷ ಮತ್ತದರ ಚಳವಳಿಯು ಇತರ ಕಡೆಗಳಿಗಿಂತ ಬಲವಾಗಿತ್ತು. ಈ ಭಾಗದ ದಲಿತರಲ್ಲಿ ಮನುವಾದಿ ವಿರೋಧಿ ತಿಳುವಳಿಕೆ ಮೂಡಲು ಪ್ರಧಾನವಾದ ಕಾರಣಕರ್ತರಲ್ಲಿ ಒಬ್ಬರಾಗಿದ್ದ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಕೂಡ ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಅವರು ಬಿಜೆಪಿಯೊಳಗೆ ಪ್ರಬಲ ಸಾವರ್ಕರ್‌ವಾದಿಯಾಗಿ ಬದಲಾಗಿರುವುದಲ್ಲದೆ ಈಗ ಸಾವರ್ಕರ್ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಸಮನ್ವಯಗೊಳಿಸಲು ತೊಡಗಿದ್ದಾರೆ.

ಗ್ರಾಮಸ್ಥರ ಪ್ರಕಾರ ಕಳೆದ ಎಪ್ರಿಲ್‌ನಲ್ಲಿ ಬದನವಾಳುವಿನಲ್ಲಿ ದಶಕದಿಂದ ನನೆಗುದಿಗೆ ಬಿದ್ದಿದ್ದ ಜಾತ್ರೆಯು ನಡೆದಿದ್ದು ಜಾತ್ರಾ ಸಮಿತಿಯಲ್ಲಿ ಪ್ರಧಾನವಾಗಿ ಲಿಂಗಾಯತರೇ ಇದ್ದರೂ ಮೂವರು ದಲಿತ ಪ್ರತಿನಿಧಿಗಳನ್ನೂ ಸೇರಿಸಿಕೊಳ್ಳಲಾಗಿದೆ. ದಲಿತರಿಗೆ ಈ ದೇವಸ್ಥಾನದಲ್ಲಿ ಶರತ್ತುಬದ್ಧ ಪ್ರವೇಶವನ್ನು ಕೊಡಲಾಗಿದ್ದರೂ, ಅರ್ಚಕರು ಮತ್ತು ವಿಧಿವಿಧಾನಗಳೆಲ್ಲವೂ ಲಿಂಗಾಯತರದೇ ಆಗಿದೆ. ಇದಲ್ಲದೆ ಲಿಂಗಾಯತರ ಕಾಲನಿಗಳಲ್ಲಿ ದಲಿತರಿಗೆ ಪ್ರವೇಶವಿಲ್ಲದ ದೇವಸ್ಥಾನಗಳಿವೆ. ಹೇಟೇಲ್‌ಗಳಲ್ಲಿ ಈಗಲೂ ದಲಿತರಿಗೆ ಪ್ಲಾಸ್ಟಿಕ್ ಕಪ್ಪುಗಳಿಂದಲೇ ಚಹ ಕೊಡಲಾಗುತ್ತದೆ.

ಒಟ್ಟಿನಲ್ಲಿ ಗ್ರಾಮದಲ್ಲಿ ೧೯೯೩ರ ನಂತರ ಜಾತಿ ಶ್ರೇಣೀಕರಣವನ್ನು ಪ್ರಶ್ನಿಸದ ಒಂದು ಹೊಸಬಗೆಯ ಸಮತೋಲನ ಏರ್ಪಟ್ಟಿದೆ. ಇದರ ಹಿಂದಿರುವ ರಾಜಕೀಯ ಶಕ್ತಿ ಹಿಂದಿನ ಕಾಂಗ್ರೆಸ್ ರೀತಿಯ ಯಥಾಸ್ಥಿತಿವಾದಿ ಸಮತೋಲನ ರಾಜಕಾರಣವಲ್ಲ. ಬದಲಿಗೆ ಎಚ್ಚೆತ್ತ ದಲಿತ ಪ್ರಜ್ಞೆಯನ್ನು ಕೊಂದು ಅದರಲ್ಲಿನ ಅವಕಾಶವಾದಿ ಶಕ್ತಿಗಳನ್ನು ಮನುವಾದಿ ವ್ಯವಸ್ಥೆಯನ್ನು ಕಿಂಚಿತ್ತೂ ಅಲುಗಾಡಿಸದೆ ಅಲ್ಲಲ್ಲಿ ಒಳಗೊಳ್ಳುವ ಆರೆಸ್ಸೆಸ್‌ನ ತಳಮಟ್ಟದ ಹಿಂದುತ್ವ- Subaltarn Hindutva ಮತ್ತು ಆನಂತರದ ಮುಸ್ಲಿಮ್ ವಿರೋಧಿ ದ್ವೇಷ ರಾಜಕಾರಣ.

ಹೀಗಾಗಿ ಭಾರತ್ ಜೋಡೊ ಯಾತ್ರೆ ಬದನವಾಳುವಿನಲ್ಲಿ ಎರಡೂ ಜಾತಿಗಳ ಜನರು ಆಗಾಗ ಬಳಸುತ್ತಿದ್ದ ರಸ್ತೆಗೆ ಸುಣ್ಣಬಣ್ಣ ಬಳಿದು ‘ಭಾರತ್ ಜೋಡೊ ರಸ್ತೆ’ ಎಂದು ಹೆಸರಿಟ್ಟಿದ್ದು ಮತ್ತು ಎಲ್ಲರೂ ಒಟ್ಟಿಗೆ ಹಳ್ಳಿಯಲ್ಲಿ ಸಹಭೋಜನ ಮಾಡಿದ್ದು ಸದಾಶಯಗಳ ಕ್ರಮಗಳೇ ಆಗಿದ್ದರೂ, ಹೊಸ ಹೆಜ್ಜೆಯಿಟ್ಟ ಕ್ರಮಗಳಲ್ಲ. ಏಕೆಂದರೆ ಎರಡೂ ಜಾತಿಯವರು ಹೆದ್ದಾರಿಯನ್ನು ಮುಟ್ಟಲು ಪ್ರತ್ಯೇಕ ರಸ್ತೆಗಳನ್ನು ಮಾಡಿಕೊಂಡಿದ್ದಾರೆ.

ಆದ್ದರಿಂದಲೇ ಬದನವಾಳುವಿನಲ್ಲಿ ಭಾರತ್ ಜೋಡೊ ನಡೆಸಿದ ಸಾಂಕೇತಿಕ ಕ್ರಮಗಳಿಗೆ ಹೆಚ್ಚು ಅರ್ಥವಿಲ್ಲವಾಗಿದೆ. 

ವಾಸ್ತವದಲ್ಲಿ ಶಿಥಿಲಗೊಂಡ ಗ್ರಾಮೀಣ ಅರ್ಥಿಕತೆಗೆ ಪರ್ಯಾಯವಾದ ಒಂದು ನೈಜ ಸಮಾಜವಾದಿ ಆರ್ಥಿಕತೆ ಮತ್ತು ಶಿಥಿಲಗೊಂಡ ಸಾಮಾಜಿಕ ಸಂಬಂಧಗಳಿಗೆ ಪ್ರಜಾತಾಂತ್ರಿಕ ಸಮಾನತೆ ಆಧರಿಸಿದ ಸಾಮಾಜಿಕ ವ್ಯವಸ್ಥೆಯ ಪರ್ಯಾಯವನ್ನು ನೀಡದೆ ಕೇವಲ ಶಿಥಿಲ ಗೋಡೆಗಳಿಗೆ ಬಣ್ಣಬಳಿಯುವ ಸತ್ವರಹಿತ ಸಂಕೇತಗಳಿಂದ ಅಪಾಯವೇ ಹೆಚ್ಚು.

ಏಕೆಂದರೆ ಇದಕ್ಕಿಂತ ಬಿಜೆಪಿ ಅಲ್ಲಿ ಮಾಡಬಯಸಿರುವ ದುರುದ್ದೇಶದ ಗಾಂಧಿ ಟೂರಿಸಂ ಮತ್ತು ಮನುವಾದಿ ಚೌಕಟ್ಟನ್ನು ಕಾಪಾಡುವ ಸ್ಥಾನಗಳಿಗೆ ಕಾವಲುಗಾರರಾಗಿ ಒಳಗೊಳ್ಳುವ Subaltarn Hindutva ಯೋಜನೆಗಳೇ ಜನಸಾಮಾನ್ಯರಿಗೆ ನೈಜ ಮತ್ತು ಎಟುಕುವ ಪರ್ಯಾಯಗಳಾಗಿ ಕಾಣುತ್ತದೆ. ತಳಸಮುದಾಯದ ನಡುವೆ ಸಂಘಪರಿವಾರದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ.

ಹೀಗಾಗಿ ಮೂಲಭೂತ ಬದಲಾವಣೆಯನ್ನು ವಿರೋಧಿಸುವ ಕಾಂಗ್ರೆಸ್‌ನ ಸವರ್ಣೀಯ ಮೃದು ಹಿಂದುತ್ವವಾದಿ ಸಾಮಾಜಿಕ ನೀತಿ ಹಾಗೂ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳ ಯಥಾಸ್ಥಿತಿವಾದವು ಹಿಂದುತ್ವಕ್ಕೆ ಪರ್ಯಾಯವಾಗುವುದಿರಲಿ ಅದರ ಪ್ರಭಾವವನ್ನು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು. 

ಭಾರತ್ ಜೋಡೊ ಹಿಂದಿನ ಕೆಲವು ಘೋಷಿತ ಸದಾಶಯಗಳನ್ನು ಮೆಚ್ಚಿಕೊಳ್ಳಬಹುದು. ಅದು ಬಿಜೆಪಿಯ ಎಲೈಟ್ ರಾಜಕಾರಣಕ್ಕೆ ಪರ್ಯಾಯವಾಗಿ ಬೀದಿಗಳಲ್ಲಿ ಮಾಡುತ್ತಿರುವ ‘ಒಳಗೊಳ್ಳುವ’ ಸಾಂಕೇತಿಕ ರಾಜಕಾರಣ ಒಂದು ಫೀಲ್ ಗುಡ್ ಫ್ಯಾಕ್ಟರ್ ಅಗಿ ಹಲವರಿಗೆ ಸಮಾಧಾನ ಕೊಡುತ್ತಿರುವುದೂ ಹೌದು.

ಆದರೆ ಸಾರದಲ್ಲಿ ಕಾರ್ಪೊರೇಟ್ ಬಂಡವಾಳವಾದ ಮತ್ತು ಯಥಾಸ್ಥಿತಿವಾದಿ ಸವರ್ಣೀಯ ಸಾಮಾಜಿಕ ನೀತಿಯನ್ನು ಆಧರಿಸಿದ ಕಾಂಗ್ರೆಸ್ ಚೌಕಟ್ಟಿನೊಳಗಿಂದ ಉಗ್ರ ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಬ್ರಾಹ್ಮಣೀಯ ಹಿಂದುತ್ವವನ್ನು ಎದುರಿಸಲು ಸಾಧ್ಯವಿಲ್ಲ. ಮಾತ್ರವಲ್ಲ, ಕಾಂಗ್ರೆಸ್‌ನ ಸತ್ವರಹಿತ ಸಾಂಕೇತಿಕ ರಾಜಕೀಯವು ಕೆಲವೊಮ್ಮೆ ಹೇಗೆ ಬ್ರಾಹ್ಮಣೀಯ ಫ್ಯಾಶಿಸಂಗೆ ಶಕ್ತಿ ತುಂಬುತ್ತದೆ ಎಂಬುದಕ್ಕೆ ಬದನವಾಳುವೇ ಉದಾಹರಣೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News