ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣ: ಸಮಿತಿ ಎದುರು ಹಾಜರಾಗುವಂತೆ ಟ್ರಂಪ್ ಗೆ ಸೂಚಿಸಲು ನಿರ್ಧಾರ

Update: 2022-10-14 16:28 GMT

ವಾಷಿಂಗ್ಟನ್, ಅ.14: ಅಮೆರಿಕದ  ಕ್ಯಾಪಿಟಲ್ ಹಿಲ್ಸ್ (Capitol Hills)ಮೇಲೆ 2021ರ ಜನವರಿ 6ರಂದು ನಡೆದ ಮಾರಣಾಂತಿಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ  ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಗೆ ಸೂಚಿಸುವ ನಿರ್ಣಯವನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿ ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ವರದಿಯಾಗಿದೆ.

ಜನವರಿ 6ರಂದು ನಡೆದ ಘಟನೆಗಳ ಸಂಪೂರ್ಣ ವಿವರವನ್ನು ಅಮೆರಿಕದ ಎಲ್ಲಾ ಪ್ರಜೆಗಳಿಗೂ ನೀಡುವುದು ಸಮಿತಿಯ ಕಾರ್ಯವಾಗಿದೆ.  ಆದ್ದರಿಂದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪಡೆಯುವುದು ನಮ್ಮ ಬಾಧ್ಯತೆಯಾಗಿದೆ ಎಂದು ಸಂಸದೀಯ ತನಿಖಾ ಸಮಿತಿಯ ಅಧ್ಯಕ್ಷ ಬೆನ್ನೀ ಥಾಮ್ಸನ್(Benny Thomson) ಹೇಳಿದ್ದಾರೆ. 

ಜನವರಿ 6ರಂದು ನಡೆದ ದುರದೃಷ್ಟಕರ ಘಟನೆಗಳಿಗೆ ಚಾಲನೆ ನೀಡಿದ, ಜನವರಿ 6ರ ಪ್ರಧಾನ ಆಟಗಾರನಿಂದ ನೇರವಾಗಿ ಉತ್ತರ  ಪಡೆಯುವುದು ನಮ್ಮ ಬಾಧ್ಯತೆಯಾಗಿದೆ. ಎಲ್ಲಾ ಅಮೆರಿಕನ್ನರೂ ಈ ಉತ್ತರಗಳಿಗೆ ಅರ್ಹನಾಗಿದ್ದಾನೆ ಎಂದು ಸಮಿತಿಯ ಉಪಾಧ್ಯಕ್ಷ ಲಿಝ್ ಚೆನೆಯ್ ಹೇಳಿದ್ದಾರೆ.

ರಿಪಬ್ಲಿಕನ್ ಮುಖಂಡ  ಟ್ರಂಪ್ ಅವರು ದಾಳಿಗೆ ಸಂಬಂಧಿಸಿ ಪ್ರಮಾಣವಚನದ ಮೂಲಕ ದಾಖಲೆ ಹಾಗೂ ಸಾಕ್ಷ್ಯಗಳನ್ನು ಒದಗಿಸುವ ಅಗತ್ಯತೆಯ ಪರವಾಗಿ ಸಮಿತಿಯ 7 ಡೆಮಾಕ್ರಾಟ್ ಸದಸ್ಯರು ಹಾಗೂ ಇಬ್ಬರು ರಿಪಬ್ಲಿಕನ್ ಸದಸ್ಯರು 9-0 ಮತಗಳ ಮೂಲಕ  ಸರ್ವಾನುಮತದ ನಿಲುವು ಪ್ರಕಟಿಸಿದರು. ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯು 1000ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ಪಡೆದಿರುವ ಜತೆಗೆ, 9 ಸಾರ್ವಜನಿಕ ಕಲಾಪಗಳನ್ನು ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News