×
Ad

#ArrestKohli ಹ್ಯಾಶ್ಟ್ಯಾಗ್ ಟ್ರೆಂಡಿಂಗ್: ಕಾರಣವೇನು ಗೊತ್ತೇ?

Update: 2022-10-15 13:08 IST
ವಿರಾಟ್ ಕೊಹ್ಲಿ (PTI)

ಚೆನ್ನೈ: ವಿಲಕ್ಷಣ ಬೆಳವಣಿಗೆಯೊಂದರಲ್ಲಿ ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾಗವಹಿಸಲು ಸದ್ಯ ಆಸ್ಟ್ರೇಲಿಯಾದಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನು ಬಂಧಿಸಬೇಕೆಂದು ಕೆಲವು ಟ್ವಿಟ್ಟರಿಗರು #ArrestKohli ಹ್ಯಾಶ್ಟ್ಯಾಗ್ ಮೂಲಕ ಟ್ವೀಟ್ ಮಾಡಿದ್ದು, ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. 

ಖ್ಯಾತ ಕ್ರಿಕೆಟಿಗನನ್ನು ಬಂಧಿಸುವಂತೆ ನೆಟ್ಟಿಗರ ಒಂದು ವಿಭಾಗ ಒತ್ತಾಯಿಸುತ್ತಿರುತ್ತಿರುವುದು ಹಲವರಿಗೆ ಅಚ್ಚರಿಯಾಗಿದೆ.

ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತನನ್ನು ಕೊಂದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ತಮಿಳುನಾಡಿನ ಪೊಲೀಸರು ಹೇಳಿದ ನಂತರ ಕೊಹ್ಲಿ ಬಂಧಿಸಬೇಕೆಂಬ ಹ್ಯಾಶ್ ಟ್ಯಾಗ್ ಆರಂಭಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಧರ್ಮರಾಜ್ ಎಂದು ಗುರುತಿಸಲಾಗಿದ್ದು, ಮೃತನನ್ನು 24 ವರ್ಷದ ವಿಘ್ನೇಶ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು.

ಕ್ರಿಕೆಟ್ ಗೆ ಸಂಬಂಧಿಸಿ ಉಂಟಾದ ಜಗಳದ ಬಳಿಕ ವಿಘ್ನೇಶ್ ಕೊಲೆಯಾಗಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ವಿಘ್ನೇಶ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಕಟ್ಟಾ ಅಭಿಮಾನಿಯಾಗಿದ್ದು, ಧರ್ಮರಾಜ್ ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಿದ್ದ. ಇಬ್ಬರೂ ಕ್ರಿಕೆಟ್ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ವಿಘ್ನೇಶ್ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಎಲ್ ನಲ್ಲಿ ವಿಘ್ನೇಶ್ ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ನನ್ನು ಬೆಂಬಲಿಸಿದ್ದರೆ, ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಅದರ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಭಿಮಾನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

“ತಮ್ಮ ವಾಗ್ವಾದ ಸಂದರ್ಭದಲ್ಲಿ ವಿಘ್ನೇಶ್ RCB ಹಾಗೂ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದ. ವೈಯಕ್ತಿಕವಾಗಿ ಕೂಢ ನಿಂದಿಸಿದ್ದ. ಇದರಿಂದ ಕುಪಿತಗೊಂಡ ಧರ್ಮರಾಜ್,  ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಧರ್ಮರಾಜ್ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

ಏತನ್ಮಧ್ಯೆ, ಕೆಲವರು ಭಾರತದ ಮಾಜಿ ನಾಯಕನನ್ನು ಬಂಧಿಸುವಂತೆ ಒತ್ತಾಯಿಸಿ #ArrestKohli ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News