ಕೋಟಿ ಕಂಠ ಗಾಯನದಲ್ಲಿ ಜಿಲ್ಲೆಯ 5 ಲಕ್ಷ ಮಂದಿ ಭಾಗಿ : ಸಚಿವ ಸುನಿಲ್ ಕುಮಾರ್
ಉಡುಪಿ, ಅ.15: ಅ.28ರಂದು ರಾಜ್ಯವೂ ಸೇರಿದಂತೆ ವಿಶ್ವದ ಇತರೆ ಭಾಗದಲ್ಲಿರುವ ಒಂದು ಕೋಟಿಗೂ ಅಧಿಕ ಕನ್ನಡಿಗರಿಂದ ಕನ್ನಡದ ಹಿರಿಮೆ ಸಾರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಲು ಎಲ್ಲಾ ಅಗತ್ಯ ಸಿದ್ಧತೆ ನಡೆಸಲಾಗುತ್ತಿದ್ದು, ಉಡುಪಿ ಜಿಲ್ಲೆಯಿಂದ 5 ಲಕ್ಷ ಜನ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಕ್ಟೋಬರ್ 28ರಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ರಾಜ್ಯದ 10,000 ಸ್ಥಳದಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು, ಸಂಘಸಂಸ್ಥೆಗಳು ಅ.20ರೊಳಗೆ ‘ಕ್ಯೂಆರ್ ಕೋಡ್’ ಮೂಲಕ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲಾಗುವುದು. ಈ ಹಾಡುಗಳನ್ನು ಹಾಡಲು ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದ ಸಚಿವರು, ರಾಜ್ಯದ 50 ಕಡೆ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದ್ದು, ಉಡುಪಿಯಲ್ಲಿ ಮಣಿಪಾಲದಲ್ಲಿ ಕೆಎಂಸಿಯ 2500 ಮಂದಿ ವೈದ್ಯರು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಮ್ಮ ಬಿಳಿ ಸಮವಸ್ತ್ರ ದಲ್ಲಿ ಸ್ಟೆತೋಸ್ಕೋಪ್ ಧರಿಸಿ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಪೆ ಸಮುದ್ರ ದಲ್ಲಿ 5 ಬೋಟುಗಳಲ್ಲಿ ಕಲಾವಿದರು, ಮೀನುಗಾರರು, ಸಾರ್ವಜನಿಕರಿಂದ ಗಾಯನ ಕಾರ್ಯಕ್ರಮ ನಡೆಸಲಾಗುವುದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಕನಿಷ್ಟ 5 ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಆಟೋಚಾಲಕರು, ಪೌರ ಕಾರ್ಮಿಕರು, ಗೇರುಬೀಜ ಕಾರ್ಖಾನೆ ಸಿಬ್ಬಂದಿ, ಮೀನುಗಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಭಾಗವಹಿಸಬೇಕು ಎಂದರು.
ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಕ್ರಮ ಕೈಗೊಳ್ಳು ವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಒಂದು ಪ್ರದೇಶದಲ್ಲಿ ಕನಿಷ್ಠ 100 ಮಂದಿ ಸೇರಿ ಹಾಡುಗಳನ್ನು ಹಾಡಬೇಕು. ಜಿಲ್ಲೆಯ ಸಹಕಾರಿ ಸಂಘಗಳು ಮತ್ತು ಅಲ್ಲಿನ ಸಿಬ್ಬಂದಿಗಳು, ಕಾರ್ಖಾನೆಗಳ ಸಿಬ್ಬಂದಿ, ಎಲ್ಲಾ ಗ್ರಾಪಂಗಳು ಮತ್ತು ನಗರಸ್ಥಳೀಯ ಸಂಸ್ಥೆಗಳಲ್ಲೂ ಸಹ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈಗಾಗಲೇ ಈ ಕಾರ್ಯಕ್ರಮಕ್ಕೆ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿರುವ ಕನ್ನಡಿಗರೂ ಸಹ ಸ್ಪಂದಿಸಿದ್ದು, ತಾವು ನೆಲೆಸಿರುವ ಪ್ರದೇಶದಿಂದಲೇ ಕನ್ನಡ ಗೀತೆಗಳನ್ನು ಹಾಡುವುದಾಗಿ ತಿಳಿಸಿದ್ದು, ಸೇನೆಯಲ್ಲಿರುವ ಕನ್ನಡಿಗ ಯೋಧರೂ ಸಹ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ನೊಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಆನ್‌ಲೈನ್ ಮೂಲಕ ಪ್ರಮಾಣಪತ್ರ ದೊರೆಯಲಿದೆ ಎಂದ ಸಚಿವರು, ಕಾರ್ಯಕ್ರಮದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಆಯೋಜನೆ ಇರುವುದಿಲ್ಲ. ಗಾಯನದ ಕೊನೆಯಲ್ಲಿ ಕನ್ನಡ ನಾಡು ನುಡಿಯ ಕುರಿತು ಸಂಕಲ್ಪ ಸ್ವೀಕರಿಸುವ ಕಾರ್ಯಕ್ರಮ ಮಾಡಬೇಕು ಎಂದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಪಂ ಸಿಇಓ ಪ್ರಸನ್ನ, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.