ಬೈಂದೂರು ಬೀದಿ ವ್ಯಾಪಾರಿಗಳ ತೆರವು ವಿರೋಧಿಸಿ ಮನವಿ
ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ಬೈಂದೂರು ಪೇಟೆ ಪರಿಸರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾಗಿರುವ ಕ್ರಮವನ್ನು ಬೀದಿಬದಿ ವ್ಯಾಪಾರಿಗಳ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಬೀದಿಬದಿ ವ್ಯಾಪಾರಿಗಳ ಗೂಡಂಗಡಿ ಎತ್ತಂಗಡಿ ಮಾಡುವು ದನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳ ನಿಯೋಗ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿ ಸುವಂತೆ ಇಂದು ಮನವಿ ಸಲ್ಲಿಸಿತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಬೈಂದೂರು ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿಯವರು ಏಕಾಏಕಿ ಮುಂಗಡವಾಗಿ ಯಾವುದೇ ಲಿಖಿತ ನೋಟೀಸ್ ನೀಡದೆ ತೆರವು ಗೊಳಿಸಲು ಹೇಳಿರುವುದು ತೀರಾ ಆಕ್ಷೇಪಣೆಯ ವಿಚಾರವಾಗಿದೆ ಎಂದು ನಿಯೋಗ ಹೇಳಿದೆ.
ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಕ್ಕೆ ಮೊದಲು ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು ರಸ್ತೆ ಅತಿಕ್ರಮಣ ಮಾಡಿ, ಅಕ್ರಮವಾಗಿ ಮಹಡಿಯ ಕಾಂಪ್ಲೆಕ್ಸ್ ಕಟ್ಟಡ ಕಟ್ಟಿರುವುದನ್ನು ತೆರವುಗೊಳಿಸುವ ಕೆಲಸವನ್ನು ಅಧಿಕಾರಿಗಳು ಮೊದಲು ಮಾಡಬೇಕು. ಅಭಿವೃದ್ಧಿ ಕಾಮಗಾರಿಗೆ ಬೀದಿಬದಿ ವ್ಯಾಪಾರಿಗಳು ವಿರೋಧ ವಿಲ್ಲ. ಬೀದಿಬದಿ ಅಂಗಡಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ವ್ಯಾಪಾರ ಪ್ರಮಾಣ ಪತ್ರ ನೀಡಬೇಕು. ಸ್ಥಳೀಯ ಪ್ರಾಧಿಕಾರ ದಲ್ಲಿ ಪಟ್ಟಣ ವ್ಯಾಪಾರ ಸಮಿತಿ ರಚಿಸಬೇಕು. ಇದರಲ್ಲಿ ಬೀದಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸದಸ್ಯರ ಸಂಖ್ಯೆಯು ಶೇ.೪೦ಕ್ಕಿಂತ ಕಡಿಮೆ ಇರಬಾರದು ಎಂದು ಸಂಘದ ಬೈಂದೂರು ತಾಲೂಕು ಸಂಚಾಲಕ ವೆಂಟೇಶ್ ಕೋಣಿ ಒತ್ತಾಯಿಸಿದ್ದಾರೆ