ಉತ್ತರಪ್ರದೇಶ: ನೆರೆ ಪರಿಹಾರಕ್ಕೆ ಕಳಪೆ ಸಿದ್ಧತೆ; ಸ್ಥಳೀಯಾಡಳಿತದ ವಿರುದ್ಧ ಬಿಜೆಪಿ ಸಂಸದ ಆಕ್ರೋಶ

Update: 2022-10-16 13:24 GMT
BJP MP Brij Bhushan Sharan Singh. | Facebook

ಲಖ್ನೋ: ಕೈಸರ್‌ಗಂಜ್‌ನ ಭಾರತೀಯ ಜನತಾ ಪಕ್ಷದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಹಾರದ ಸಿದ್ಧತೆಗಳನ್ನು ಟೀಕಿಸಿದ್ದಾರೆ. ನೆರೆ ಸಂತ್ರಸ್ತರಾಗಿರುವ ನಾಗರಿಕರನ್ನು "ದೇವರ ಕೃಪೆಗೆ ಬಿಡಲಾಗಿದೆ" ಎಂದು ಹೇಳಿದ ಅವರು "ಪ್ರವಾಹ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ಇಂತಹ ಕಳಪೆ ಸಿದ್ಧತೆಗಳನ್ನು ನಾನು ಎಂದಿಗೂ ನೋಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ TNIE ವರದಿ ಮಾಡಿದೆ.

ಕಳೆದ ವಾರದಲ್ಲಿ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ನೀರು ಒಡ್ಡುಗಳನ್ನು ಮುರಿದು ನುಗ್ಗಿರುವ ಭಾರೀ ನೀರು ಹಲವಾರು ಹಳ್ಳಿಗಳನ್ನು ಮುಳುಗಿಸಿದೆ. ಶುಕ್ರವಾರ, ರಾಜ್ಯದ 21 ಜಿಲ್ಲೆಗಳಲ್ಲಿ ಒಟ್ಟು 1,667 ಗ್ರಾಮಗಳು ಜಲಾವೃತವಾಗಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೈಸರ್‌ಗಂಜ್ ಕ್ಷೇತ್ರಕ್ಕೆ ಒಳಪಡುವ ಗೊಂಡಾ ಮತ್ತು ಬಲರಾಮ್‌ಪುರ ಜಿಲ್ಲೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇರಿವೆ.

ಸಮರ್ಪಕ ಪರಿಹಾರ ಕ್ರಮಗಳನ್ನು ಖಾತರಿಪಡಿಸದ ಜಿಲ್ಲಾಡಳಿತದಿಂದ ತಪ್ಪಾಗಿದೆ ಎಂದು ಸಿಂಗ್ ಹೇಳಿದ್ದಾರೆ. "ಹಿಂದೆ, ಸಾರ್ವಜನಿಕ ಪ್ರತಿನಿಧಿಗಳೊಂದಿಗೆ [ಪ್ರವಾಹ ನಿಯಂತ್ರಣಕ್ಕಾಗಿ] ಸಭೆಗಳನ್ನು ಆಯೋಜಿಸಲಾಗಿತ್ತು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಆದರೆ ಈ ಬಾರಿ ಆಡಳಿತವು ಗಂಭೀರವಾಗಿರಲಿಲ್ಲ." ಎಂದು ಅವರು ಕಿಡಿಕಾರಿದ್ದಾರೆ.

ಪರಿಹಾರ ಕಾರ್ಯಗಳ ಮೌಲ್ಯಮಾಪನದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳಪೆ ಸಿದ್ಧತೆಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

"ನಾವು ನಮ್ಮ (ನೋವ)ನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಮಾತನಾಡುವುದನ್ನು ಅನುಮತಿಸಲಾಗುವುದಿಲ್ಲ, ಯಾವುದೇ ನಾಯಕರು ಮಾತನಾಡುವವರನ್ನು ಬಂಡಾಯ ಎಂದು ಕರೆಯುತ್ತಾರೆ ಮತ್ತು ಅವರು ಸಲಹೆಗಳನ್ನು ನೀಡಿದರೆ ಯಾರೂ ಕೇಳುವುದಿಲ್ಲ“ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News