‘ದಿ ವೈರ್’ನ ಇಮೇಲ್ ವಿಳಾಸ ಹ್ಯಾಕ್: ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಪ್ರತಿಪಾದನೆ

Update: 2022-10-16 16:21 GMT

ಹೊಸದಿಲ್ಲಿ, ಅ. 16: ಸಂಸ್ಥೆಯ ಇಮೇಲ್ ವಿಳಾಸವನ್ನು ಹ್ಯಾಕ್ ಮಾಡಲಾಗಿದೆ ಎಂದು ಸುದ್ದಿ ವೆಬ್‌ಸೈಟ್ ‘ದಿ ವೈರ್’ನ  ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ರವಿವಾರ ಪ್ರತಿಪಾದಿಸಿದ್ದಾರೆ.  ಸಂಸ್ಥೆಯಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ದೇವೇಶ್ ಕುಮಾರ್ ಅವರು ತಮ್ಮ ಜಿಮೇಲ್ ಹಾಗೂ ಟ್ವಿಟರ್ ಖಾತೆಗಳ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.

‘ದಿ ವೈರ್’ ಅಕ್ಟೋಬರ್ ೬ರಿಂದ  ಪ್ರಕಟಿಸಲು ಆರಂಭಿಸಿದ ಸರಣಿ ವರದಿಯ ಕುರಿತು ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದ ನಡುವಿನ ವಿವಾದದ ಮಧ್ಯೆ ಅವರು ಈ ಹೇಳಿಕೆ ನೀಡಿದ್ದಾರೆ. ಮೆಟಾ ಮಾಲಕತ್ವದ ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿಯ ನಾಯಕ ಅಮಿತ್ ಮಾಳವಿಯ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪವನ್ನು ಈ ವರದಿ ಹೊಂದಿತ್ತು. 

ದಿ ವೈರ್ ಬಳಸುವ ಇಮೇಲ್ ವಿಳಾಸವನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿರುವ ವರದರಾಜನ್, thewirein@proton.me.ಯ ಯಾವುದೇ ಇಮೇಲ್‌ಗೆ ಪ್ರತಿಕ್ರಿಯಿಸಬೇಡಿ ಎಂದು ಅಂತರ್ಜಾಲ ಬಳಕೆದಾರರನ್ನು ಆಗ್ರಹಿಸಿದ್ದಾರೆ. 

ಮೆಟಾದ ಕುರಿತು ವರದಿ ಮಾಡಿದ ಲೇಖಕರಲ್ಲಿ ಕುಮಾರ್ ಅವರು ರವಿವಾರ ಅಪರಾಹ್ನ ಹಲವು ಇಮೇಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಖಾತೆಯ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಹ್ಯಾಕ್ ಮಾಡಿದವರು ಸಂದೇಹಾಸ್ಪದ  ಸಂದೇಶವನ್ನು ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News