ಮದ್ಯ ನೀತಿ ಪ್ರಕರಣ: ಸಿಬಿಐ ಕಚೇರಿಗೆ ಹಾಜರಾದ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ

Update: 2022-10-17 06:04 GMT
ಮನೀಶ್ ಸಿಸೋಡಿಯಾ, Photo: twitter

ಹೊಸದಿಲ್ಲಿ: ಮುಂಬರುವ ಗುಜರಾತ್ ಚುನಾವಣೆಯ ಪ್ರಚಾರದಿಂದ ತನ್ನನ್ನು ತಡೆಯುವ ಬಿಜೆಪಿ "ಯೋಜನೆ"ಯ ಭಾಗವಾಗಿ ಇಂದು ತನ್ನ ಬಂಧನವಾಗಲಿದೆ ಎಂದು ಭವಿಷ್ಯ ನುಡಿದಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ Manish Sisodia ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ.

ಸಿಸೋಡಿಯಾ ಅವರು ಮೊದಲು ರೋಡ್‌ಶೋ ನಡೆಸಿದರು. ಸಿಬಿಐ ಕಚೇರಿಗೆ ಹೋಗುವ ಮಾರ್ಗದಲ್ಲಿ ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್ ಘಾಟ್ ಸೇರಿದಂತೆ ಹಲವಡೆ ತೆರಳಿದರು.ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

"ಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಿತ್ತು. ನಾನು ಗುಜರಾತ್‌ಗೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ‘ಗುಜರಾತ್‌ನಲ್ಲಿ ಬಿಜೆಪಿಗೆ ಸೋಲುವುದು ಗೊತ್ತಿರುವುದರಿಂದಲೇ ಭಯಗೊಂಡಿದೆ’ ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಸಿಬಿಐ ಕಚೇರಿಗೆ ಹೊರಡುವ ಮೊದಲು ಆಶೀರ್ವಾದ ಪಡೆಯಲು ಸಿಸೋಡಿಯಾ ತಮ್ಮ ತಾಯಿಯ ಪಾದಗಳನ್ನು ಸ್ಪರ್ಶಿಸುತ್ತಿರುವ ವೀಡಿಯೊವನ್ನು  ಹಂಚಿಕೊಂಡಿದ್ದಾರೆ.  ಈ ವೇಳೆ ಪಕ್ಷದ ಸಂಸದ ಸಂಜಯ್ ಸಿಂಗ್ ಹಾಗೂ  ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಎಎಪಿ ನಾಯಕರು ಅವರ ಮನೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News