ಇನ್ನೊಂದು ಭಾಷಾ ಯುದ್ಧಕ್ಕೆ ಆಸ್ಪದ ನೀಡಬೇಡಿ: ಹಿಂದಿ ಹೇರಿಕೆ ವಿರುದ್ಧ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಸ್ಟಾಲಿನ್
ಹೊಸದಿಲ್ಲಿ: ಹಿಂದಿ (Hindi) ಭಾಷೆ ಹೇರಿಕೆಯನ್ನು ವಿರೋಧಿಸಿ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M.K. Stalin) ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರಲ್ಲದೆ ಹಿಂದಿ ಹೇರಿ ಇನ್ನೊಂದು ಭಾಷಾ ಯುದ್ಧಕ್ಕೆ ಆಸ್ಪದ ನೀಡಬೇಡಿ ಎಂದಿದ್ದಾರೆಂದು ವರದಿಯಾಗಿದೆ.
ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ಗಳಲ್ಲಿ ಶಿಕ್ಷಣ ಮಾಧ್ಯಮವು ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ ಆಗಿರಬೇಕು ಹಾಗೂ ಇತರ ಭಾಗಗಳಲ್ಲಿ ಆಯಾಯ ಪ್ರಾದೇಶಿಕ ಭಾಷೆಯಾಗಿರಬೇಕು ಎಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದ ಬೆನ್ನಿಗೆ ಸ್ಟಾಲಿನ್ ಅವರು ಪತ್ರ ಬರೆದಿದ್ದಾರೆ.
"ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ ಮತ್ತು ನಾವು ಎಲ್ಲಾ ಭಾಷೆಗಳನ್ನು ಸಮನಾಗಿ ಕಾಣಬೇಕು. ಎಲ್ಲಾ ಭಾಷೆಗಳು ಅಧಿಕೃತ ಭಾಷೆಗಳಾಗುವ ಮಟ್ಟಕ್ಕೆ ನಾವು ಹೋಗಬೇಕು. ಹಿಂದಿ ಹೇರಿಕೆ ಮೂಲಕ ಇನ್ನೊಂದು ಭಾಷಾ ಯುದ್ಧವನ್ನು ನಮ್ಮ ಮೇಲೆ ಹೇರಬೇಡಿ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ದೇಶದ ಏಕತೆಯನ್ನು ಉಳಿಸಬೇಕೆಂದು ಪ್ರಧಾನ ಮಂತ್ರಿ ಹಾಗೂ ಸರಕಾರವನ್ನು ಕೋರುತ್ತೇವೆ,'' ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ತಮಿಳುನಾಡು ಮಾತ್ರವಲ್ಲ, ತನ್ನ ಮಾತೃಭಾಷೆಯ ಮೇಲೆ ಅಭಿಮಾನವಿರುವ ಯಾವುದೇ ರಾಜ್ಯ ಕೇಂದ್ರದ ಕ್ರಮವನ್ನು ವಿರೋಧಿಸುವುದು ಎಂದು ಅವರು ಹೇಳಿದರು.
"ಹಿಂದಿ ದಿವಸ ವೇಳೆ ಹಿಂದಿ ಅಧಿಕೃತ ಭಾಷೆಯಾಗಬೇಕೆಂದು ಅಮಿತ್ ಶಾ ಹೇಳಿದರು. ಆದರೆ ಅವರ ನೇತೃತ್ವದ ಸಮಿತಿಯು ಹಿಂದಿಯನ್ನು ಕಲಿಕಾ ಮಾಧ್ಯಮವನ್ನಾಗಿಸಲು ಶಿಫಾರಸು ಮಾಡಿದೆ. ಭಾರತದಾದ್ಯಂತ ಹಲವೆಡೆ, ಶಿಕ್ಷಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಿಂದಿ ಮಾತನಾಡುವುದಿಲ್ಲ. ಇದು ಒಡೆದು ಆಳುವ ನೀತಿಯಂತೆ, ಹಿಂದಿ ಮಾತನಾಡುವವರು ಪ್ರಥಮ ದರ್ಜೆ ನಾಗರಿಕರಂತೆ ಹಾಗೂ ಉಳಿದವರು ಎರಡನೇ ದರ್ಜೆ ನಾಗರಿಕರಂತೆ,'' ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ