ಬಿಹಾರ: ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

Photo: Twitter Screengrab
ಪಾಟ್ನಾ: ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಹೇಳಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ಗುಂಪು ಬಿಹಾರದ ಮುಝಫ್ಫರಪುರ್ ಜಿಲ್ಲೆಯ ಕಾಲೇಜೊಂದರಲ್ಲಿ ಪ್ರತಿಭಟನೆ ನಡೆಸಿದ ಘಟನೆ ರವಿವಾರ ನಡೆದಿದೆ.
ಮುಝಫ್ಫರಪುರ್ನ ಮಹಂತ್ ದರ್ಶನ್ ದಾಸ್ ಮಹಿಳಾ ಕಾಲಾಜಿನಲ್ಲಿ ಸೆಂಟ್ ಅಪ್ ಪರೀಕ್ಷೆಗಳ ವೇಳೆ ಈ ಘಟನೆ ನಡೆದಿದೆ. ಬಿಹಾರದಲ್ಲಿ 10 ಹಾಗೂ 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿದ್ದರೆ ಸೆಂಟ್ ಅಪ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಗೊಳ್ಳಬೇಕಿದೆ.
ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದಾಗ ಶಿಕ್ಷಕರೊಬ್ಬರು ನಿಂದನಾತ್ಮಕ ಪದ ಬಳಸಿದರೆಂದು ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾರೆ.
"ನಾವು ತರಗತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ, ಶಿಕ್ಷಕರೊಬ್ಬರು ಅಲ್ಲಿಗೆ ಬಂದು ನಾವು ಬ್ಲೂಟೂತ್ ಸಾಧನ ಬಳಸುವ ಸಾಧ್ಯತೆಯಿದೆಯೆಂದು ಹೇಳಿ ಹಿಜಾಬ್ ತೆಗೆಯುವಂತೆ ಹೇಳಿದರು. ನಾವು ನಿರಾಕರಿಸಿದಾಗ ತರಗತಿ ಹೊರಗೆ ಹೋಗುವಂತೆ ಹೇಳಲಾಯಿತು" ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
"ಆದರೆ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ನಿಯಮಗಳಿಗೆ ವಿರುದ್ಧವಾಗಿ ಮೊಬೈಲ್ ಫೋನ್ಗಳನ್ನು ತಂದಿದ್ದರು. ಈ ನಿರ್ದಿಷ್ಟ ವಿದ್ಯಾರ್ಥಿನಿಗೆ ಕೂಡ ಮೊಬೈಲ್ ಅನ್ನು ಪರೀಕ್ಷಾ ಕೊಠಡಿಯಿಂದ ಹೊರಗಿರಿಸುವಂತೆ ಹೇಳಲಾಗಿತ್ತು" ಎಂದು ಪ್ರಾಂಶುಪಾಲೆ ಕಾನು ಪ್ರಿಯಾ ಹೇಳಿದ್ದಾರೆ.
"ವಿದ್ಯಾರ್ಥಿನಿ ಬಳಿ ಬ್ಲೂಟೂತ್ ಇದೆಯೇ ಎಂದು ಪರಿಶೀಲಿಸಲು ಕಿವಿ ಭಾಗವನ್ನು ತೋರಿಸುವಂತೆ ಹೇಳಲಾಗಿತ್ತು ಅದರಿಂದ ಆಕೆಗೆ ಸಮಸ್ಯೆಯಿದ್ದರೆ ಆಕೆ ಪರೀಕ್ಷಾ ನಿಯಂತ್ರಕರು ಅಥವಾ ನನ್ನ ಬಳಿ ಹೇಳಬಹುದಾಗಿತ್ತು. ಆದರೆ ಆಕೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಆಕೆಗೆ ತಿಳಿದಿತ್ತೆನ್ನಲಾದ ಕೆಲ ಸ್ಥಳೀಯ ಸಮಾಜ ವಿರೋಧಿ ಶಕ್ತಿಗಳಿಗೆ ಕರೆ ಮಾಡಿದ್ದಳು. ಆವರು ಆಗಮಿಸಿದಾಗ ಆಕೆ ರಾದ್ಧಾಂತ ಸೃಷ್ಟಿಸಿದಳು" ಎಂದು ಪ್ರಾಂಶುಪಾಲೆ ಹೇಳಿದ್ದಾರೆ.
ಒಬ್ಬ ಶಿಕ್ಷಕರು ತನ್ನನ್ನು ದೇಶವಿರೋಧಿ ಎಂದು ಕರೆದು ಪಾಕಿಸ್ತಾನಕ್ಕೆ ಹೋಗಲು ಹೇಳಿದ್ದಾರೆಂದು ಇನ್ನೊಬ್ಬ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲೆ, ಘಟನೆ ನಡೆದ ಸಂದರ್ಭ ತಾನು ಅಲ್ಲಿರಲಿಲ್ಲ ಆದರೆ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಈ ಆರೋಪ ಸುಳ್ಳು ಎಂದು ಹೇಳಿದ್ದಾರೆ ಎಂದರು.
ವಿದ್ಯಾರ್ಥಿನಿಯ ಹಾಜರಾತಿ ಪ್ರಮಾಣ ಕೂಡ ಕಡಿಮೆಯಾಗಿತ್ತು. ನಿಯಮಗಳ ಪ್ರಕಾರ ಶೇ 75ಕ್ಕಿಂತ ಕಡಿಮೆ ಹಾಜರಾತಿ ಇರುವವರು ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳುವಂತಿಲ್ಲ ಎಂದೂ ಪ್ರಾಂಶುಪಾಲೆ ಹೇಳಿದ್ದಾರಲ್ಲದೆ ಈ ರೀತಿ ಸಮಸ್ಯೆ ಸೃಷ್ಟಿಸಿ ತನ್ನ ವಿಚಾರದಲ್ಲಿ ಆಡಳಿತ ಮಂಡಳಿ ನಿಯಮವನ್ನು ಸಡಿಲಗೊಳಿಸಬಹುದೆಂದು ಆಕೆ ಅಂದುಕೊಂಡಿರಬೇಕು, ಎಂದು ತಿಳಿಸಿದ್ದಾರೆ.
Muslim girls were forced to remove Hijab, tagged as Pakistani anti Nationals by teachers at Mahanant Darshan Das Mahila Mahavidyalay in Muzaffarpur District of Bihar. pic.twitter.com/PfRw6Hlyif
— Ahmed Khabeer احمد خبیر (@AhmedKhabeer_) October 17, 2022







