ಜೆನೆಟ್ ಬಾರ್ಬೋಜಗೆ ರಾಷ್ಟ್ರೀಯ ಮಹಿಳಾ ಪ್ರಶಸ್ತಿ
ಉಡುಪಿ, ಅ.17: ಮಹಿಳಾ ಸಂಘಟನೆಗಾಗಿ ಉಡುಪಿ ಜಿಲ್ಲೆಯ ಜೆನೆಟ್ ಬಾರ್ಬೋಜ ಮುದರಂಗಡಿ ಇವರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ಸ್ತ್ರೀ ಆಯೋಗ, ಅಖಿಲ ಭಾರತೀಯ ಕೆಥೊಲಿಕ್ ಬಿಷಪ್ ಮಂಡಳಿ ವತಿಯಿಂದ ಲಕ್ನೋದ ನವಿಂತಾ ಧರ್ಮ ಕೇಂದ್ರದಲ್ಲಿ ನಡೆದ ೪ನೇ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಭಾರತೀಯ ಬಿಷಪ್ ಮಂಡಳಿಯ ಅಧ್ಯಕ್ಷ ಪಾಂಡಿಚೇರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ.ರೆ.ಫ್ರಾನ್ಸಿಸ್ ಕಾಲಿಸ್ತ್ ಹಾಗೂ ರಾಷ್ಟ್ರೀಯ ಸ್ತ್ರೀ ಆಯೋಗದ ಕಾರ್ಯದರ್ಶಿ ಭಗಿನಿ ಲಿಡ್ವಿನ್ ಫೆರ್ನಾಂಡಿಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮಹಿಳಾ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ತಾಲೂಕು ಒಕ್ಕೂಟ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ರಚನೆ, ಸ್ತ್ರೀಯರ ಸಬಲೀಕರಣ, ರಾಜಕೀಯ ಹಾಗೂ ವಿವಿಧ ಸ್ತರಗಳಲ್ಲಿ ನೀಡಿದ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಪದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಸಂಘಟನೆಯ ಮಾಜಿ ಅಧ್ಯಕ್ಷೆ ಜೂಡಿತ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.