ಉಡುಪಿ: ಅ. 18ರಂದು ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟನೆ
Update: 2022-10-17 20:15 IST
ಉಡುಪಿ, ಅ.17: ಕ್ರೀಡಾಪಟುವೊಬ್ಬನ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕ್ರೀಡಾ ವಿಜ್ಞಾನ ಕೇಂದ್ರವೊಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಾರಂಭ ಮಾಡಲಿದ್ದು, ಇದರ ಉದ್ಘಾಟನೆ ಮಂಗಳವಾರ ಸಂಜೆ 6 ಗಂಟೆಗೆ ನಡೆಯಲಿದೆ.
ಕ್ರೀಡಾ ವಿಜ್ಞಾನ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಬಂದರು, ಮೀನುಗಾರಿಕೆ ಹಾಗೂ ಒಳನಾಡ ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸಿಇಓ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಕ್ರೀಡಾಪಟುವೊಬ್ಬನಿಗೆ ಅಗತ್ಯವಿರುವ ಸ್ಪೋರ್ಟ್ಸ್ ಮೆಡಿಸಿನ್, ಫಿಸಿಯೋಥೆರಪಿ, ಸ್ಪೋರ್ಟ್ಸ್ ಸೈಕಾಲಜಿ, ನ್ಯೂಟ್ರಿಷಿಯನ್, ಬಯೋ ಮೆಕಾನಿಕ್ಸ್ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.