ರಷ್ಯಾ ಯುದ್ಧ ವಿಮಾನ ಪತನ: ಕನಿಷ್ಠ ಆರು ಮಂದಿ ಮೃತ್ಯು

Update: 2022-10-18 03:08 GMT

ಕೀವ್: ರಷ್ಯಾ ಯುದ್ಧ ವಿಮಾನ, ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ನೈರುತ್ಯ ರಷ್ಯಾದ ಯೆಯಾಸ್ಕ್ ಪಟ್ಟಣದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ. ಇದರಿಂದ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಸಜೀವ ದಹನವಾಗಿದ್ದಾರೆ ಎಂದು ರಷ್ಯನ್ ಅಧಿಕಾರಿಗಳು ಹೇಳಿದ್ದಾರೆ.

"ದುರಂತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ" ಎಂದು ತುರ್ತು ಸಂದರ್ಭಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಇಡೀ ಪ್ರದೇಶವನ್ನು ರಷ್ಯಾ ಸೈನಿಕರು ಸುತ್ತುವರಿದಿದ್ದಾರೆ ಎಂದು ಸ್ಥಳೀಯ ನಿವಾಸಿ ಒಕ್ಸಾನಾ ಹೇಳಿದ್ದಾರೆ. ಈ ಸುದ್ದಿ ಸ್ಫೋಟಗೊಂಡಾಗ ತಾನು ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗಿ ಆಕೆ ವಿವರಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೂ ಈ ದುರಂತದ ಬಗ್ಗೆ ಮಾಹಿತಿ ನೀಡಲಾಗಿದ್ದು, ಎಲ್ಲ ಅಗತ್ಯ ನೆರವು ಕಲ್ಪಿಸುವಂತೆ ಅಧ್ಯಕ್ಷರು ಸೂಚಿಸಿದ್ದಾಗಿ ಕ್ರೆಮ್ಲಿನ್ ಪ್ರಕಟಣೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಟಾಸ್ ವರದಿ ಮಾಡಿದೆ.

ಅಕ್ಟೋಬರ್ 17ರಂದು ದಕ್ಷಿಣ ಮಿಲಿಟರಿ ಜಿಲ್ಲೆಯ ಮಿಲಿಟರಿ ವಾಯುನೆಲೆಯಲ್ಲಿ ಟೇಕಾಫ್ ಆಗುತ್ತಿದ್ದ ವಿಮಾನ ಎಸ್‍ಯು-34 ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ವಿಮಾನ ಪತನವಾದಾಗ ಇಂಧನ ಟ್ಯಾಂಕ್‍ಗೆ ಬೆಂಕಿ ಹತ್ತಿಕೊಂಡಿತು ಎಂದು ವಿವರಿಸಿದೆ. ಪಕ್ಕದ ವಸತಿ ಸಂಕೀರ್ಣದ ಮಹಡಿಗೆ ಬೆಂಕಿ ತಗುಲಿತ್ತು ಎಂದು ತುರ್ತು ಸೇವಾ ವಿಭಾಗ ಹೇಳಿದೆ. ಈ ಬಗ್ಗೆ news.com.au ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News