ವಿದ್ಯುತ್ ಅವಘಡ: ಸಾಮಾಜಿಕ ಮುಖಂಡ ಸತೀಶ ಪ್ರಭು ಮೃತ್ಯು
ಬೈಂದೂರು, ಅ.18: ಕೃಷಿ ತೋಟದಲ್ಲಿ ಏಣಿ ಮೇಲೆ ನಿಂತು ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಾಮಾಜಿಕ ಮುಖಂಡರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಶಿರೂರಿನಲ್ಲಿ ನಡೆದಿದೆ.
ಮೃತರನ್ನು ಶಿರೂರಿನ ಸತೀಶ ಸುಬ್ರಾಯ ಪ್ರಭು (52) ಎಂದು ಗುರುತಿಸಲಾಗಿದೆ. ಇವರು ಪ್ರಗತಿಪರ ಕೃಷಿಕರು, ಬಿಜೆಪಿ ಮುಖಂಡರು, ಉದ್ಯಮಿ, ಸಾಮಾಜಿಕ ಮುಖಂಡರಾಗಿ ಗುರುತಿಸಿಕೊಂಡಿದ್ದು, ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಆರೆಸ್ಸೆಸ್ ಹಿರಿಯ ಸದಸ್ಯರಾಗಿದ್ದರು.
ಕೆಲಸದವರ ಜೊತೆ ತೆಂಗಿನಕಾಯಿ ಕಟಾವು ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಅವರು ಮೃತಪಟ್ಟರು. ನಿವೃತ್ತ ಕಂದಾಯ ಅಧಿಕಾರಿ ಸುಬ್ರಾಯ ಪ್ರಭು ಅವರ ಪುತ್ರರಾಗಿರುವ ಇವರು ಹಲವು ವರ್ಷ ಪ್ರಭು ಡ್ರೆಸ್ ಲ್ಯಾಂಡ್ ಬಟ್ಟೆ ಮಳಿಗೆ ನಡೆಸುತ್ತಿದ್ದರು.
ಘಟನಾ ಸ್ಥಳಕ್ಕೆ ಆರಕ್ಷಕ ಇಲಾಖೆ, ವಿವಿಧ ಮುಖಂಡರು, ಹಿತೈಷಿಗಳು ಆಗಮಿಸಿದ್ದರು. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.