ಮಧ್ಯಪ್ರದೇಶ: ಇಬ್ಬರು ದಲಿತ ಯುವಕರ ತಲೆ ಬೋಳಿಸಿ ಮೆರವಣಿಗೆ

Update: 2022-10-19 18:27 GMT
Photo: ndtv.com

ಭೋಪಾಲ್, ಅ. 19: ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರ ತಲೆ ಬೋಳಿಸಿ ಮೆರವಣಿಗೆ ಮಾಡಲಾಗಿದೆ.

ಭಿಂದ್ ದೆಹಾತ್ ಪೊಲೀಸ್ ಠಾಣಾ ವ್ಯಾಪ್ತಿಯ ದಾಬೋಹ್ ಗ್ರಾಮದಲ್ಲಿ  ಸೋಮವಾರ ಈ ಘಟನೆ ನಡೆದಿದೆ.

ಒಂದೂವರೆ ತಿಂಗಳ ಹಿಂದೆ ಗ್ರಾಮದ ಮೂವರು ನಿವಾಸಿಗಳಾದ ರಾಮವೀರ್ ಶಕ್ಯ, ಸಂತೋಷ್ ಶಕ್ಯ, ಧರ್ಮೇಂದ್ರ ಶಕ್ಯ ಹಾಗೂ ದಿಲೀಪ್ ಶರ್ಮಾ ಅವರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಶರ್ಮಾ ಅವರ ತಲೆಗೆ ಗಾಯವಾಗಿತ್ತು. ಅನಂತರ ರಾಮ್‌ವೀರ್, ಸಂತೋಷ್ ಹಾಗೂ ಧರ್ಮೇದ್ರ ಗ್ರಾಮದಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ಅಧೀಕ್ಷಕ ಶೈಲೇಂದ್ರ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.

ಇತ್ತೀಚೆಗೆ ಈ ಮೂವರ ಪರವಾಗಿ ಶಕ್ಯ ಸಮುದಾಯದ ವ್ಯಕ್ತಿ ಹರಿರಾಮ್ ಎಂಬಾತ ವಿವಾದ ಇತ್ಯರ್ಥ ಮಾಡಲು ಗ್ರಾಮದ ಆಡಳಿತದ ಮುಂದೆ ಪ್ರಸ್ತಾವ ಇರಿಸಿದ್ದ. ಅನಂತರ ಗ್ರಾಮದಲ್ಲಿ ಪಂಚಾಯತಿ ಆಯೋಜಿಸಲಾಗಿತ್ತು. ಪಂಚಾಯತಿಯಲ್ಲಿ ಶರ್ಮಾ ಅವರ ಚಿಕಿತ್ಸೆಗೆ 1.5 ಲಕ್ಷ ರೂ. ಪಾವತಿಸುವಂತೆ ಮೂವರಿಗೆ ಆದೇಶಿಸಲಾಗಿತ್ತು.

ತರುವಾಯ ಸಂತೋಷ್ ಹಾಗೂ ಧರ್ಮೇಂದ್ರ ಅವರ ತಲೆ ಬೋಳಿಸಲಾಯಿತು ಹಾಗೂ ಕುತ್ತಿಗೆಗೆ ಚಪ್ಪಲಿಗಳ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದಿಲೀಪ್ ಶರ್ಮಾ ಹಾಗೂ ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News