"ಮುಸ್ಲಿಮರು ಲಕ್ಷ್ಮಿದೇವಿಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಲ್ಲವೇ?": ವಿವಾದ ಸೃಷ್ಟಿಸಿದ BJP ಶಾಸಕ

Update: 2022-10-20 06:31 GMT
ಲಲನ್ ಪಾಸ್ವಾನ್ (Photo: Twitter)

ಪಾಟ್ನಾ: ಬಿಹಾರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಾಸ್ವಾನ್  ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಹಾಗೂ  ತಮ್ಮ ನಿಲುವನ್ನು ಸಾಬೀತುಪಡಿಸಲು 'ಸಾಕ್ಷ್ಯ'ಗಳೊಂದಿಗೆ ವಾದಿಸಿದರು.

ಪಾಸ್ವಾನ್  ವಿರುದ್ಧ ಭಾಗಲ್ಪುರದ ಶೆರ್ಮರಿ ಬಝಾರ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು ಮತ್ತು ಅವರ ಪ್ರತಿಕೃತಿಯನ್ನು ಸುಡಲಾಯಿತು.

ಪಾಸ್ವಾನ್ ಅವರು ದೀಪಾವಳಿಯಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಪ್ರಶ್ನಿಸಿದ್ದಾರೆ.

“ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುತ್ತಿದ್ದರೆ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು, ಇರುತ್ತಿರಲಿಲ್ಲ.  ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಾಗಿಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ, ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು IAS ಅಥವಾ IPS ಆಗುವುದಿಲ್ಲವೇ?" ಎಂದು ಶಾಸಕರು ಪ್ರಶ್ನಿಸಿದರು.

"ಆತ್ಮ ಮತ್ತು ಪರಮಾತ್ಮ" ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು.

"ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ, ನಾವು ದೇವರು ಮತ್ತು ದೇವತೆಗಳನ್ನು ನಂಬುತ್ತೇವೆಯೇ ಅಥವಾ ನಂಬುವುದಿಲ್ಲವೇ ಎಂಬುದು ನಮಗೆ ಬಿಟ್ಟದ್ದು, ತಾರ್ಕಿಕ ತೀರ್ಮಾನ ಬರಲು ನಾವು ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು. ನೀವು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ"ಎಂದರು.

"ಬಜರಂಗಬಲಿ ಶಕ್ತಿಯುಳ್ಳ ದೇವತೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಅವರು ಶಕ್ತಿಶಾಲಿಗಳಲ್ಲವೇ? ನೀವು ನಂಬುವುದನ್ನು ನಿಲ್ಲಿಸಿದ ದಿನ, ಈ ಎಲ್ಲಾ ವಿಷಯಗಳು ಕೊನೆಗೊಳ್ಳುತ್ತವೆ" ಎಂದು ಪಾಸ್ವಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News