ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವಿರುದ್ಧ ಎರಡು ಪ್ರಕರಣಗಳು ದಾಖಲು
ಸುರತ್ಕಲ್, ಅ.20: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ವಿರುದ್ಧ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಘಟನೆಗೆ ಸಂಬಂಧಿಸಿದಂತೆ ಎನ್.ಎಮ್.ಪಿ. ಆರ್. ಸಿ.ಎಲ್. ನ ಪ್ರೋಜೆಕ್ಟ್ ಡೈರೆಕ್ಟರ್ ಆಗಿರುವ ಲಿಂಗೇಗೌಡ ಅವರು ಪ್ರಕರಣ ದಾಖಲಿಸಿದ್ದರೆ, ಇನ್ನೊಂದು ಪ್ರಕರಣವನ್ನು ಎನ್.ಎಂ.ಪಿ. ರೋಡ್ ಕಂಪೆನಿ ಲಿಮಿಟೆಡ್ ನ ಫಿಝ್ ಕಲೆಕ್ಷನ್ ಏಜೆನ್ಸಿ ನೂರ್ ಮುಹಮ್ಮದ್ ಸಂಸ್ಥೆಯ ಎನ್ಐಟಿಆರ್ ಟೋಲ್ ವಿಭಾಗದ ಮಾನೇಜರ್ ಶಸುಕುಮಾರ್ ಅವರು ನೀಡಿದ್ದಾರೆ.
ಎಸಿಪಿ ಅವರ ಕಚೇರಿಯಲ್ಲಿ ಸಭೆ ನಡೆಸಿದ್ದಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಭರವಸೆ ನೀಡಿ ಅ.18ರಂದು ಸುಮಾರು 25-30 ಮಂದಿಯ ಕೂಟ ಟೀಲ್ ಗೇಟ್ ಗೆ ಮುತ್ತಿಗೆ ಹಾಗಿ ಘೋಷಣೆಗಳನ್ನು ಕೂಗುವ ಜೊತೆಗೆ ರಾ.ಹೆ. 66ರಲ್ಲಿ ವಾಹನಗಳನ್ನು ತಡೆದು ಸಾರ್ವಜನಿಕಿಗೆ ತೊಂದರೆ ನೀಡಿದ್ದಾರೆ ಎಂದು ಲಿಂಗೇಗೌಡ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಸಂದರ್ಭ ಟೋಲ್ ಗೇಟ್ ಹೋರಾಟ ಸಮಿತಿಯ ಸುಮಾರು 20-25 ಅಪರಿಚಿತರ ಗುಂಪು ಟೋಲ್ ಗೇಟ್ ಗೆ ಮುತ್ತಿಗೆ ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಶಿಸುಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಟೋಲ್‌ಗೇಟ್ ಹೋರಾಟಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು FIR ಹಾಕಲಾಗಿದೆ. ಎರಡೂ ದೂರು ಒಂದೆ ತರ ಇದೆ. ಒಂದು ಟೋಲ್ ಲೂಟಿ ಗುತ್ತಿಗೆ ಕಂಟ್ರಾಕ್ಟರ್ ನೂರ್ ಮಹಮ್ಮದ್ ಕಂಪೆನಿಯಿಂದ, ಇನ್ನೊಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಲಿಂಗೇಗೌಡ ಅವರು ನೀಡಿದ್ದಾರೆ.
ಎರಡರ ಸಾರಾಂಶವೂ ಒಂದೇ ಆಗಿದ್ದು, ಹೆದ್ದಾರಿ ಸಂಚಾರಕ್ಕೆ ತೊಡಕು ಉಂಟು ಮಾಡಿದ್ದಾರೆ ಎಂದು. ತಲಾ 20 ರಿಂದ 25 ಜನ ಗುರುತಿಲ್ಲದವರು ಎಂದು ಯಾರ ಹೆಸರೂ ಉಲ್ಲೇಖಿಸದೆ ದೂರು ನೀಡಲಾಗಿದೆ. (ಒಂದು ಘಟನೆಗೆ ಒಂದೇ FIR ಹಾಕುವುದಲ್ವ ! ಎರಡು ಯಾಕೆ ? ಎಂದು ಕೇಳಬೇಡಿ. ಇದು ಡಬ್ಬಲ್ ಇಂಜಿನ್ ಬಿಜೆಪಿ ಸರಕಾರ) ಎಂದು ಸರಕಾರವನ್ನು ಲೇವಡಿ ಮಾಡಿದ್ದಾರೆ.
ಯಾವ ಅಶಾಂತಿ, ಆಸ್ತಿಪಾಸ್ತಿ ಹಾನಿಗೆ ಅವಕಾಶ ನೀಡದ ತುಳುನಾಡಿನ ಮಾದರಿ ಹೋರಾಟವೊಂದನ್ನು ನಿರ್ದಯವಾಗಿ ಅಕ್ರಮದಾರಿಯಲ್ಲಿ ಹತ್ತಿಕ್ಕಲು ನೋಡುತ್ತಿದ್ದೀರಿ. ಪೊಲೀಸ್ ಕೇಸುಗಳ ಮೂಲಕ ಹೋರಾಟವನ್ನು ಮುಗಿಸಿ ಬಿಡುತ್ತೀವಿ ಅನ್ನುವುದು ನಿಮ್ಮ ಭ್ರಮೆ. ಕೆಟ್ಟ ಟ್ರೋಲು, ಪೊಲೀಸ್ ಕೇಸು ಒಟ್ಟೊಟ್ಟಿಗೆ ಆರಂಭ ಆಗಿದೆ. ಅಂದರೆ ಚಿತ್ರಕತೆ ಒಂದೇ ಕಡೆ ಸಿದ್ಧಗೊಳ್ಳುತ್ತಿದೆ ಅಂತಾಯ್ತು. ಟೋಲ್ ಮುಚ್ಚಿ ಅಂದರೆ ನಮ್ಮ ಬಾಯಿ ಮುಚ್ಚಿಸುತ್ತಿದ್ದೀರಿ. ಇದು ಅಸಾಧ್ಯ. ಇದು ಖಂಡನಾರ್ಹ. ಇದು ಹೋರಾಟ ಸಮಿತಿಯ ಮೇಲಿನ ಎಫ್ಐಆರ್ ಅಲ್ಲ. ಹೋರಾಟ ಸಮಿತಿ ಜೊತೆ ನಿಂತಿರುವ ತುಳುನಾಡಿನ ಸಮಸ್ತ ಜನಸಮೂಹದ ಮೇಲೆ ಹಾಕಿರುವ ಎಫ್ಐಆರ್ ಎಂದು ಹೇಳಿದ್ದಾರೆ.
ತುಳುನಾಡಿನ ಬೆಂಬಲದೊಂದಿಗೆ ಇದನ್ನು ಎದುರಿಸುತ್ತೇವೆ. ನಾವು ಪೊಲೀಸ್ ವಶದಿಂದ ಹೊರಬಂದ ತರುವಾಯ ದೂರು ಬರೆಸಿಕೊಂಡಿದ್ದೀರಿ. ಇದು ಹೇಡಿತನ, ವಂಚಕತನ. ಟೋಲ್ ತೆರವಿನವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಮುನೀರ್ ಕಾಟಿಪಳ್ಳ ಸ್ಪಷ್ಟಪಡಿಸಿದ್ದಾರೆ.