ಛಾಯಾ ಧರ್ಮ ಜಾಗೃತಿ ಅಭಿಯಾನಕ್ಕೆ ಚಾಲನೆ
ಉಡುಪಿ, ಅ.20: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಹಾಗೂ ಉಡುಪಿ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳ ಲಾದ ಛಾಯಾ ಧರ್ಮ ಜಾಗೃತಿ ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ದೇವರ ಛಾಯಾ ಚಿತ್ರ, ಮೂರ್ತಿ ಹಾಗು ಛಾಯಾಚಿತ್ರಗಳನ್ನು ತಮ್ಮ ಗೃಹಗಳನ್ನು ನವೀಕರಿಸುವ ಸಂದರ್ಭದಲ್ಲಿ ಇಲ್ಲವೇ ಪೂಜಿಸುತ್ತಿದ್ದ ಮೂರ್ತಿಗಳ ಕೈ ಕಾಲುಗಳು ಭಗ್ನಗೊಂಡಾಗ ಅವನ್ನು ದಾರಿ ಬದಿ ಅಥವಾ ಮರದ ಬದಿ ಎಸೆಯದೆ ಸೂಕ್ತ ಸ್ಥಳಗಳಲ್ಲಿ ವಿವೇವಾರಿ ಮಾಡುವುದು ನಮ್ಮ ಧರ್ಮ ಜಾಗೃತಿ ಮಾತ್ರವಲ್ಲ ಕರ್ತವ್ಯ ಕೂಡ ಎಂದರು.
ಈ ಬಗ್ಗೆ ಮಾಹಿತಿ ಮತ್ತು ಅಭಿಯಾನಕ್ಕಾಗಿ ಈಗಾಗಲೇ ಕೆಲವು ಸ್ಥಳವನ್ನು ಗುರುತಿಸಲಾಗಿದ್ದು, ಎರಡು ದಿನಗಳ ಕಾಲ ರಸ್ತೆ ಬದಿ ಇರುವ ಎಲ್ಲ ದೇವರ ಫೋಟೋಗಳನ್ನು ವ್ಯವಸ್ಥಿತವಾಗಿ ತೆರವುಗೊಳಿಸಿ ಈ ಬಗ್ಗೆ ಮಾಹಿತಿ ಇರುವ ಬೋರ್ಡ್ ಅಳವಡಿಸಲಾಗಿದೆ. ಪ್ರತಿವಾರ ನಿರಂತರ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲು ಉದ್ದೇಶಿಸಲಾಗಿದೆ. ಎರಡು ದಿನದಲ್ಲಿ ಸುಮಾರು 20 ಕಟ್ಟೆಯಲ್ಲಿ ಇರಿಸಿದ್ದ ಫೋಟೋ ಗಳನ್ನು ತೆರವುಗೊಳಿಸಿ ಕಟ್ಟೆಯನ್ನು ಶುಚಿಗೊಳಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಾಮನ ಪಡುಕೆರೆ ಸಂತೋಷ್ ಪಂದುಬೆಟ್ಟು, ಪ್ರವೀಣ್ ಕೊರೆಯ, ಸುಕೇಶ್ ಅಮೀನ್, ಸಂತೋಷ್ ಕೊರಂಗ್ರಪಾಡಿ, ಪೂರ್ಣಿಮಾ ಜನಾರ್ದನ್, ಶಿವಪ್ರಸಾದ್ ಬೆಳ್ಕಳೆ, ಸುಶಾಂತ್ ಕೆರೆಮಠ, ಪ್ರಜ್ವಲ್ ಕಟಪಾಡಿ, ಪ್ರಕಾಶ್ ಕೊಡಂಕೂರು, ಕೆ.ವಾಸುದೇವ ರಾವ್, ನಿದೇಶ್ ಕುಮಾರ್, ಸಿದ್ಧ ಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ಎಸ್‌ಕೆಪಿಎ ಉಡುಪಿ ವಲಯ ಅಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ ದರು. ಛಾಯಾ ಧರ್ಮ ಜಾಗೃತಿಯ ಸಂಚಾಲಕ ಸುರಭಿ ರತನ್ ವಂದಿಸಿದರು.