ಅ.26ರಂದು ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

Update: 2022-10-20 15:15 GMT

ಹೊಸದಿಲ್ಲಿ,ಅ.20: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಶಶಿ ತರೂರ್ (Shashi Tharoor)ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ(Mallikarjuna Kharge)ಯವರು ಅ.26ರಂದು ದಿಲ್ಲಿಯ ಎಐಸಿಸಿ ಕೇಂದ್ರಕಚೇರಿಯಲ್ಲಿ ಪಕ್ಷದ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ)ಯ ಸಭೆಯ ದಿನಾಂಕವನ್ನು ಈವರೆಗೆ ಅಂತಿಮಗೊಳಿಸಲಾಗಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ಅ.17ರಂದು ಮತದಾನ ನಡೆದಿದ್ದು, ದೇಶಾದ್ಯಂತದ ಪ್ರದೇಶ ಕಾಂಗ್ರೆಸ್ ಸಮಿತಿಗಳ 9,000ಕ್ಕೂ ಅಧಿಕ ಪ್ರತಿನಿಧಿಗಳು ಮತ ಚಲಾಯಿಸಿದ್ದರು. ಬುಧವಾರ ಮತಗಳ ಎಣಿಕೆ ನಡೆದಿದ್ದು,ಖರ್ಗೆ 7,987 ಮತಗಳನ್ನು ಪಡೆದಿದ್ದರೆ ಅವರ ಪ್ರತಿಸ್ಪರ್ಧಿ ಶಶಿ ತರೂರ್ ಅವರಿಗೆ ಕೇವಲ 1,072 ಮತಗಳು ಲಭ್ಯವಾಗಿದ್ದವು.

ಗೆಲುವಿನ ಬಳಿಕ ತನ್ನ ಮೊದಲ ಭಾಷಣದಲ್ಲಿ ಖರ್ಗೆ,‘ಪ್ರಜಾಸತ್ತಾತ್ಮಕ ಸೋಗಿನಲ್ಲಿದ್ದು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಹೋರಾಡಬೇಕಿದೆ ’ ಎಂದು ಹೇಳಿದ್ದರು.

ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ಅಧೋಗತಿಗೆ ಇಳಿದಿರುವ ಕಾಂಗ್ರೆಸ್ ಪಕ್ಷವನ್ನು ಖರ್ಗೆ ಪುನಃಶ್ಚೇತನಗೊಳಿಸುತ್ತಾರೆ ಎಂಬ ನಿರೀಕ್ಷೆಯಿರುವುದರಿಂದ ಈ ಹಿರಿಯ ನಾಯಕ ಸವಾಲಿನ ಹಾದಿಯನ್ನು ಎದುರಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News