ಹೈದರಾಬಾದ್: ʻಸಾಲ ವಸೂಲಿ ಏಜೆಂಟರ ಕಿರುಕುಳದಿಂದ ನೊಂದು ವ್ಯಕ್ತಿ ಆತ್ಮಹತ್ಯೆ
ಹೈದರಾಬಾದ್,ಅ.20: ಸಾಲ ಮರುಪಾವತಿಗಾಗಿ ಫೈನಾನ್ಸ್ ಕಂಪನಿ(A finance company)ಯೊಂದರ ವಸೂಲಿ ಏಜೆಂಟರ ಕಿರುಕುಳದಿಂದಾಗಿ ಬೇಸತ್ತಿದ್ದ ಹೈದರಾಬಾದ್ (Hyderabad)ನಿವಾಸಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಎದುರಿಸುತ್ತಿದ್ದ ಸಂಕಷ್ಟದ ಕುರಿತು ವೀಡಿಯೊದಲ್ಲಿ ದಾಖಲಿಸಿದ ಬಳಿಕ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಮುಹಮ್ಮದ್ ನಿಝಾಮುದ್ದೀನ್ (Muhammad Nizamuddin)ವೃತ್ತಿಯಿಂದ ಆಟೊ ಚಾಲಕನಾಗಿದ್ದು ಆರು ತಿಂಗಳುಗಳಿಂದ ನಿರುದ್ಯೋಗಿಯಾಗಿದ್ದ. ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲ ಪಡೆದು ಎರಡು ಫೋನ್ಗಳನ್ನು ಖರೀದಿಸಿದ್ದ ಆತ ಸಮಯಕ್ಕೆ ಸರಿಯಾಗಿ ಕಂತುಗಳನ್ನು ಮರುಪಾವತಿಸಿದ್ದ. ಆದರೆ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಳೆದ ಎರಡು ತಿಂಗಳುಗಳಿಂದ 4,000 ರೂ.ಗಳನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಸಾಲ ವಸೂಲಿ ಏಜೆಂಟರು ಮನೆಬಾಗಿಲಿಗೆ ಬಂದು ಕಿರುಕುಳಗಳನ್ನು ನೀಡತೊಡಗಿದ್ದರು.
ಕಿರುಕುಳ ಮತ್ತು ಅವಮಾನವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ತನ್ನ ಆತ್ಮಹತ್ಯಗೆ ಫೈನಾನ್ಸ್ ಕಂಪನಿಯ ಕಿರುಕುಳವೇ ಕಾರಣ ಎಂದು ನಿಝಾಮುದ್ದೀನ್ ಸಾಯುವ ಮುನ್ನ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾನೆ.
ಸೆಲ್ಫಿ ವೀಡಿಯೊದ ಸಾಕ್ಷಾಧಾರದೊಂದಿಗೆ ಕುಟುಂಬದ ಸದಸ್ಯರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಕುಸುಮಪುರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.