ತೈವಾನ್ ನೊಂದಿಗೆ ಜಂಟಿ ಶಸ್ತ್ರಾಸ್ತ್ರ ಉತ್ಪಾದನೆ : ಅಮೆರಿಕ

Update: 2022-10-20 16:43 GMT

ವಾಷಿಂಗ್ಟನ್, ಅ.20: ಚೀನಾ ವಿರುದ್ಧ ತೈವಾನ್ (Taiwan)ನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಶಸ್ತ್ರಾಸ್ತ್ರ(weapon) ವರ್ಗಾವಣೆಯನ್ನು ವೇಗಗೊಳಿಸುವ ಉದ್ದೇಶದಿಂದ ತೈವಾನ್ ನೊಂದಿಗೆ  ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಯೋಜನೆಯನ್ನು ಅಮೆರಿಕ ಸರಕಾರ ಪರಿಗಣಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ತೈವಾನ್ ತನ್ನ ಭೂವ್ಯಾಪ್ತಿಗೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ 2017ರಿಂದ ತೈವಾನ್ ಮೇಲೆ ಸೇನಾ ಒತ್ತಡವನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಅಮೆರಿಕ ಶಸ್ತ್ರಾಸ್ತ್ರ ನೆರವನ್ನು ಒದಗಿಸುತ್ತಿದೆ. ಆದರೆ ಕೆಲವು ಕಾರಣಗಳಿಂದ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ಇದೀಗ ತೈವಾನ್ನಲ್ಲಿಯೇ ಶಸ್ತ್ರಾಸ್ತ್ರ ಉತ್ಪಾದಿಸುವ ಪ್ರಸ್ತಾವನೆಯನ್ನು ಅಮೆರಿಕ ಗಂಭೀರವಾಗಿ ಪರಿಶೀಲಿಸುತ್ತಿದೆ. ಈ ಪ್ರಕ್ರಿಯೆ ಆರಂಭಕ್ಕೆ ಇದು ಸಕಾಲ ಎಂದು ಅಮೆರಿಕ-ತೈವಾನ್ ವ್ಯಾಪಾರ ಸಮಿತಿಯ ಅಧ್ಯಕ್ಷ ರೂಪರ್ಟ್ ಹ್ಯಾಮಂಡ್ ಹೇಳಿದ್ದಾರೆ. ಆದರೆ ಪ್ರಮುಖ ತಂತ್ರಜ್ಞಾನವನ್ನು ಒಳಗೊಂಡ ಉತ್ಪಾದನಾ ಪ್ರಕ್ರಿಯೆಯನ್ನು ವಿದೇಶದ ನೆಲದಲ್ಲಿ ಆರಂಭಿಸುವ ಲೈಸೆನ್ಸ್ ಪಡೆಯವುದು ಕಠಿಣ ಕಾರ್ಯವಾಗಿದೆ ಎಂದವರು ಹೇಳಿದ್ದಾರೆ.

ಇದೇ ವೇಳೆ, ಶಸ್ತ್ರಾಸ್ತ್ರ ಉತ್ಪಾದನೆಗೆ ತೈವಾನ್ಗೆ  ತಾಂತ್ರಿಕ ನೆರವು ಒದಗಿಸುವ ಬಗ್ಗೆಯೂ ಅಮೆರಿಕ ಪರಿಶೀಲಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News