ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿತ: ಪೊಲೀಸ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದ ಗುಜರಾತ್‌ ಹೈಕೋರ್ಟ್‌

Update: 2022-10-22 12:48 GMT
Photo: thequint.com

ಅಹಮದಾಬಾದ್: ನವರಾತ್ರಿ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಿ ಖೇಡಾ (Kheda) ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರು ಸೇರಿದಂತೆ ರಾಜ್ಯ ಅಧಿಕಾರಿಗಳಿಗೆ ಗುಜರಾತ್ ಹೈಕೋರ್ಟ್‌ನ (Gujarat HC) ವಿಭಾಗೀಯ ಪೀಠ ಗುರುವಾರ ನೋಟಿಸ್ ಜಾರಿ ಮಾಡಿದೆ. 

ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎಜೆ ಶಾಸ್ತ್ರಿ ಅವರ ಪೀಠದ ಮುಂದೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಐಎಚ್ ಸೈಯದ್, ‘‘ಪೊಲೀಸರೇ ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಪೊಲೀಸ್ ವ್ಯಾನ್‌ನಲ್ಲಿ, ಅವರನ್ನು (ಸಂತ್ರಸ್ತರನ್ನು) ಪೊಲೀಸ್ ಠಾಣೆಯಿಂದ ಕರೆತರಲಾಯಿತು, ಎಲ್ಲರನ್ನೂ ಹೊರಗೆಳೆದು, ಥಳಿಸಿ ನಂತರ ಪೊಲೀಸ್ ವಾಹನಕ್ಕೆ ಹಾಕಲಾಯಿತು. ಇದು ಬಂಧನಗಳನ್ನು ಮಾಡುವಾಗ ಪೊಲೀಸರಿಗೆ ಸುಪ್ರೀಂಕೋರ್ಟ್ ನೀಡಿದ ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆ" ಎಂದು ವಾದಿಸಿದ್ದಾರೆ.

ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು. ಇದಕ್ಕಾಗಿ, ‘ಮೂಲ ಡಿವಿಆರ್‌ಗಳು, ಎಸ್‌ಒಜಿ ಕಚೇರಿಯ ಕ್ಯಾಮೆರಾಗಳು, ಟೋಲ್ ಪ್ಲಾಜಾಗಳು ಮತ್ತು ದಾರಿಯುದ್ದಕ್ಕೂ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಎಸ್‌ಪಿ ಖೇಡಾ ಅವರಿಗೆ ನ್ಯಾಯಾಲಯ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಅಕ್ಟೋಬರ್ 3 ರ ರಾತ್ರಿ 11 ಗಂಟೆ ಸುಮಾರಿಗೆ ಖೇಡಾ ಜಿಲ್ಲೆಯ ಮಟರ್ ತಾಲೂಕಿನ ಉಂಧೇಲಾ ಗ್ರಾಮಕ್ಕೆ ಶಾಸಕ ಕೇಸರಿ ಸಿಂಗ್ ಸೋಲಂಕಿ ಮತ್ತು ಅವರ ಪಕ್ಷದವರು ಆಗಮಿಸಿದ ನಂತರ ಗರ್ಬಾ ಉತ್ಸವದ ಬಗ್ಗೆ ವಿವಾದ ಉಂಟಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಬಳಿಕ, ಪೊಲೀಸರು ಸ್ಥಳಕ್ಕೆ ತಲುಪಿ "ಅರ್ಜಿದಾರರು ಸೇರಿದಂತೆ ಪ್ರತಿವಾದಿಗಳಾಗಿ ಹೆಸರಿಸಲಾದ 11 ಅಮಾಯಕರನ್ನು" ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. 

ಅರ್ಜಿದಾರರ ಪ್ರಕಾರ, ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಪೊಲೀಸರು ಮಕ್ಸೂದ ಬಾನು (ಅರ್ಜಿದಾರರಲ್ಲಿ ಒಬ್ಬರು) ಎಂಬ ಮಹಿಳೆಯ ಮನೆಗೆ ಪ್ರವೇಶಿಸಿ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅವರನ್ನು ಖೇಡಾದಲ್ಲಿರುವ ಎಸ್‌ಒಜಿ ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿಯಿಡೀ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿದಾರರ ಪ್ರಕಾರ, ಅರ್ಜಿದಾರರು ಮತ್ತು ಇತರ ಐವರನ್ನು ಅಕ್ಟೋಬರ್ 4 ರಂದು ಮಧ್ಯಾಹ್ನದ ಸುಮಾರಿಗೆ ಉಂಧೇಲಾದ ಮಸೀದಿ ಚೌಕ್‌ಗೆ ಕರೆತಂದು, ಚೌಕದ ಮಧ್ಯದಲ್ಲಿರುವ ಕಂಬಕ್ಕೆ ಕಟ್ಟಿಹಾಕಲಾಯಿತು. ಅಲ್ಲಿ ಸಾರ್ವಜನಿಕರ ಮುಂದೆ 13 ಪೊಲೀಸ್ ಸಿಬ್ಬಂದಿ ಲಾಠಿಗಳಿಂದ ಥಳಿಸಿದರು. ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದ್ದು, ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಸಾರ ಮಾಡಲಾಗಿದೆ. ಥಳಿಸಿದ ನಂತರ ಆಸ್ಪತ್ರೆಗೆ ಕರೆದೊಯ್ಯುವಂತೆ ಮಾಡಿದ ಮನವಿಯನ್ನು ಪೊಲೀಸರು "ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ" ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಯನ್ನು ಸಾಯಿಸಿಲ್ಲ ಎಂದು ಅತ್ಯಾಚಾರ ಆರೋಪಿಯ ಶಿಕ್ಷೆ ಪ್ರಮಾಣ ಇಳಿಸಿದ ನ್ಯಾಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News